ನಗರದ ಹೊರ ವಲಯದಲ್ಲಿರುವ ಸಿಮ್ಸ್ ಆಸ್ಪತ್ರೆ 450 ಹಾಸಿಗೆಗಳನ್ನು ಒಳಗೊಂಡಿದ್ದು, ಹೊರರೋಗಿ ವಿಭಾಗ, ಒಳರೋಗಿ ವಿಭಾಗ, ತುರ್ತು ಚಿಕಿತ್ಸೆ ವಿಭಾಗ, 9 ಆಪರೇಷನ್ ಥಿಯೇಟರ್ ಮತ್ತು ಸುಪರ್-ಸ್ಪೆಷಾಲಿಟಿ ವಿಭಾಗಗಳನ್ನು ಹೊಂದಿದೆ. ಈ ಆಸ್ಪತ್ರೆ ನುರಿತ ವೈದ್ಯರು ಹಾಗೂ ಸಿಬ್ಬಂದಿಯನ್ನು ಒಳಗೊಂಡಿದೆ. ಆದರೆ ಅತ್ಯುತ್ತಮವಾದ ಕಟ್ಟಡವನ್ನು ಒಳಗೊಂಡಿರುವ ಸಿಮ್ಸ್ ಆಸ್ಪತ್ರೆಯ ಗೋಡೆಗಳ ಟೈಲ್ಸ್ಗಳು ಇತ್ತೀಚೆಗೆ ಅಲ್ಲಲ್ಲಿ ಕಳಚಿ ಬೀಳುತ್ತಲೇ ಇದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ನೆಲ ಮಹಡಿ, ಮೊದಲನೇ ಮಹಡಿ, ಎರಡನೇ ಮಹಡಿಯ ಗೋಡೆಗಳು, ಮಹಡಿಗಳಿಗೆ ಹೋಗುವ ಮೆಟ್ಟಿಲುಗಳ ಗೋಡೆಗಳಲ್ಲಿ ಅಳವಡಿಸಿದ್ದ ಟೈಲ್ಸ್ಗಳು ಅಲ್ಲಲ್ಲಿ ಕಳಚಿ ಬೀಳುತ್ತಲೇ ಇದೆ. ಈವರೆಗೂ ಇದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಆದರೆ ನಿತ್ಯವೂ ಸಾವಿರಾರು ಜನರು ಸಿಮ್ಸ್ ಆಸ್ಪತ್ರೆಯಲ್ಲಿ ಓಡಾಡುವುದರಿಂದ ಮುಂದಿನ ದಿನಗಳಲ್ಲಿ ಯಾವುದಾದರೂ ಅನಾಹುತಗಳು ಸಂಭವಿಸದಂತೆ ಸಿಮ್ಸ್ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.