ಯಳಂದೂರು: ತಾಲೂಕಿನ ಮದ್ದೂರು ಗ್ರಾಮ ಪಂಚಾಯಿತಿ ಪಿಡಿಒ ನಟರಾಜು ಸಾರ್ವಜನಿಕ ಕೆಲಸವನ್ನು ಮಾಡುವಲ್ಲಿ ಅಪಾರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪಂಚಾಯಿತಿಯಲ್ಲಿ ಮನರೇಗಾ ಸೇರಿದಂತೆ ಅನೇಕ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮವಹಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಾಪಂ ನರೇಗಾ ವ್ಯವಸ್ಥಾಪಕ ರವೀಂದ್ರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಅನೇಕ ಕಾಮಗಾರಿಗಳಲ್ಲಿ ಅಕ್ರಮ ಎಸೆಗಲಾಗಿದೆ. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು, ಕಸ ವಿಲೇವಾರಿ, ಚರಂಡಿ ಹೂಳು, ಬೀದಿ ದೀಪಗಳ ಸಮಸ್ಯೆ ನಿವಾರಿಸುವಲ್ಲಿ ಇವರು ನಿರ್ಲಕ್ಷ್ಯ ತೋರಿದ್ದಾರೆ. ನರೇಗಾ ಯೋಜನೆಯಲ್ಲಿ ಕೆಲಸ ನಡೆಯದಿದ್ದರೂ ಬಿಲ್ ಪಾವತಿಸಲಾಗಿದೆ. ಇವರು ಕಚೇರಿಗೆ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವುದಿಲ್ಲ. ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ ಉಡಾಫೆಯಿಂದ ಉತ್ತರ ನೀಡುತ್ತಾರೆ. ಸಾಮೂಹಿಕ ಶೌಚಗೃಹಗಳ ನಿರ್ವಹಣೆ ಮಾಡಿಲ್ಲ. ಈಗ ಬೇಸಿಗೆಯಾಗಿದ್ದು ಅನೇಕ ಕಡೆ ನೀರಿನ ಸಮಸ್ಯೆ ಉಲ್ಬಣಿಸಿದ್ದು ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ನೀರಿನ ತೊಂಬೆಗಳನ್ನು ಶುಚಿಗೊಳಿಸಿಲ್ಲ. ಕಸ ವಿಲೇವಾರಿ ಮಾಡಿಲ್ಲ. ಈಗ ಬೇಸಿಗೆಯಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ.
ಅನೇಕ ಬಾರಿ ಇವರ ವಿರುದ್ಧ ದೂರು ನೀಡಿದ್ದರೂ ಕ್ರಮವಹಿಸಿಲ್ಲ. ಕೂಡಲೇ ಇವರ ವಿರುದ್ಧ ಕಾನೂನು ಕ್ರಮವಹಿಸಬೇಕು ಎಂದು ಗ್ರಾಮದ ಮಂಜುನಾಥ್, ನಟರಾಜು, ಕುಮಾರಸ್ವಾಮಿ, ಮಹೇಶ್‌ಕುಮಾರ್, ನಂದೀಶ್, ಮಹದೇವಯ್ಯ, ಚಿನ್ನಸ್ವಾಮಿ ದೂರು ನೀಡಿದರು.