ಈ ವೇಳೆ ಸುದ್ದಿಗಾರರೊಂದಿಗೆ ಶಾಸಕರು ಮಾತನಾಡಿ, ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಸಮರ್ಪಕ ಮಳೆಯಾಗದ ಪರಿಣಾಮ. ಕೃಷಿ ಹಾಗೂ ಜನ, ಜಾನುವಾರುಗಳ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದ್ದು, ಜನತೆ ಸಂಕಷ್ಟದಲ್ಲಿದ್ದರು. ಅದರಲ್ಲೂ ರಾಮಾಪುರ ಹೋಬಳಿ ವ್ಯಾಪ್ತಿಯ ರೈತರು ಹಾಗೂ ಜನರು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡು ರಾಮನಗುಡ್ಡೆ ಕೆರೆಗೆ ನೀರು ತುಂಬಿಸುವ ವೇಳೆ ಆಗಮಿಸಿದ್ದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಲಾಗಿತ್ತು. ಉಡುತೊರೆಹಳ್ಳ ಜಲಾಶಯದ ನೀರಾವರಿ ಯೋಜನೆಗೆ ಆರಂಭದಲ್ಲಿ 330 ಕೋಟಿ ರೂ., ಡಿಪಿಆರ್ ಸಿದ್ದಪಡಿಸಲಾಗಿತ್ತು. ಈ ವೇಳೆ ಮಾರ್ಟಳ್ಳಿ ಹಾಗೂ ಕುರಟ್ಟಿ ಭಾಗದಲ್ಲಿನ ರೈತರಿಂದ ನೀರಾವರಿಯ ಯೋಜನೆಯ ಬಗ್ಗೆ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆ ಡಿಪಿಆರ್ ಅನ್ನು 490 ಕೋಟಿ ರೂ., ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಸಿಎಂ ಅವರ ಗಮನಕ್ಕೂ ತರಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಡಾ.ಎಚ್. ಸಿ. ಮಹದೇವಪ್ಪ, ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್ ಅವರು ಈ ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದರು. ಜತೆಗೆ ರೈತ ಸಂಘಟನೆಯು ಸಹ ಕೈಜೋಡಿಸಿತ್ತು. ಇದರ ಫಲ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಅನುಮೋದನೆ ನೀಡಿರುವುದು ಕ್ಷೇತ್ರದ ಇತಿಹಾಸದಲ್ಲೇ ಐತಿಹಾಸಿಕ ಸುದಿನ. ಕ್ಷೇತ್ರದ ಜನತೆಗೆ ಸಂದ ಜಯ. ರಾಮಾಪುರ ಹೋಬಳಿಯ ಸಮರ್ಪಕ ನೀರಾವರಿ ಸೌಕರ್ಯಕ್ಕೆ ಸಹಕಾರಿಯಾಗಿದೆ. ಈ ಯೋಜನೆ ಶೀಘ್ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇನ್ನಿಲ್ಲದ ಶ್ರಮ ವಹಿಸಿ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.