ಭೈರನತ್ತದಲ್ಲಿ ಬಗೆಹರಿಯದ ಸ್ಮಶಾನ ರಸ್ತೆ ಸಮಸ್ಯೆ

ಹನೂರು ತಾಲೂಕು ಭೈರನತ್ತ ಗ್ರಾಮದಲ್ಲಿ ಸ್ಮಶಾನ ರಸ್ತೆ ಸಮಸ್ಯೆ ಸಂಬಂಧ ಭೂ ಮಾಪನಾ ಇಲಾಖೆಯ ಅಧಿಕಾರಿಗಳು ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರ ಸಮುಖದಲ್ಲಿ ಅಳತೆ ಕಾರ್ಯ ನಡೆಸಲಾಯಿತು.
ಹನೂರು ತಾಲೂಕು ಭೈರನತ್ತ ಗ್ರಾಮದಲ್ಲಿ ಸ್ಮಶಾನ ರಸ್ತೆ ಸಮಸ್ಯೆ ಸಂಬಂಧ ಭೂ ಮಾಪನಾ ಇಲಾಖೆಯ ಅಧಿಕಾರಿಗಳು ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರ ಸಮುಖದಲ್ಲಿ ಅಳತೆ ಕಾರ್ಯ ನಡೆಸಲಾಯಿತು.
Published on
ಹನೂರು: ತಾಲೂಕಿನ ಭೈರನತ್ತ ಗ್ರಾಮದಲ್ಲಿ ಗುರುವಾರ ತಹಸೀಲ್ದಾರ್ ಕೆ.ಎನ್.ಚೈತ್ರಾ ಅವರ ಸಮ್ಮುಖದಲ್ಲಿ ಸೂಕ್ತ ಬಂದೋಬಸ್ತ್‌ನೊಂದಿಗೆ ಕೈಗೊಂಡಿದ್ದ ಅಳತೆ ಕಾರ್ಯ ಗೊಂದಲದ ಗೂಡಾಯಿತು. ಕೊನೆಗೂ ಸ್ಮಶಾನ ರಸ್ತೆಯ ಸಮಸ್ಯೆ ಬಗೆಹರಿಯದಂತಾಯಿತು.
ಗ್ರಾಮದ ಸರ್ವೇ ನಂ.75ರಲ್ಲಿ ಈ ಹಿಂದೆಯೇ ಆದಿಜಾಂಬವ ಸಮುದಾಯಕ್ಕೆ ಸ್ಮಶಾನ ಮಂಜೂರಾಗಿದ್ದು, ಇಲ್ಲಿಗೆ ತೆರಳಲು ಪೂರ್ವಿಕರ ಕಾಲದಿಂದಲೂ ಮೂಲ ರಸ್ತೆ ಇದೆ. ಇದರಿಂದ ಶವ ಸಂಸ್ಕಾರ ನಡೆಸಲು ಈವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ 4 ತಿಂಗಳ ಹಿಂದೆ ಈ ಭಾಗದಲ್ಲಿನ ರೈತರೊಬ್ಬರೂ ರಸ್ತೆ ಹಾಗೂ ಹಳ್ಳವನ್ನು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಸ್ಮಶಾನಕ್ಕೆ ತೆರಳಲು ಸಮಸ್ಯೆಯಾಗಿದೆ. ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಸಮುದಾಯದ ಮುಖಂಡರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರು 3 ಬಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಜ.8ರಂದು ಸ್ಥಳಕ್ಕಾಗಮಿಸಿ ಅಳತೆ ಕಾರ್ಯ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ್ದರು.
ಅದರಂತೆ ಗುರುವಾರ 11.30ಕ್ಕೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಅವರ ಸಮ್ಮುಖದಲ್ಲಿ ಭೂ ಮಾಪನಾ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಇನ್ಸ್‌ಪೆಕ್ಟರ್ ಆನಂದಮೂರ್ತಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಂಜೆ 4ಗಂಟೆಯವರೆಗೂ ಗ್ರಾಮಸ್ಥರ ಸಮಕ್ಷಮದಲ್ಲಿ ಹಳ್ಳ ಹಾಗೂ ಆಸುಪಾಸಿನ ರೈತರ ಜಮೀನನ್ನು ಅಳತೆ ಕಾರ್ಯ ಮಾಡಲಾಯಿತು. ಆದರೆ ಈ ಬಗ್ಗೆ ಸಮರ್ಪಕ ಮಾಹಿತಿ ದೊರಕದ ಪರಿಣಾಮ ಸಮಸ್ಯೆ ಬಗೆಹರಿಯಲಿಲ್ಲ. ಈ ವೇಳೆ ಸಂಬಂಧಪಟ್ಟ ಜಮೀನಿನ ಮಾಲೀಕರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ಇದಕ್ಕೆ ಒಂದು ವಾರ ಕಾಲಾವಕಾಶ ನೀಡುವಂತೆ ತಹಸೀಲ್ದಾರ್ ಅವರು ಮನವಿ ಮಾಡಿದರು.
ಈ ವೇಳೆ ಮುಖಂಡರು ಮಾತನಾಡಿ, ಒಟ್ಟಿನಲ್ಲಿ ಸ್ಮಶಾನಕ್ಕೆ ತೆರಳಲು 30 ಅಡಿ ರಸ್ತೆ ಅಗತ್ಯತೆ ನಮ್ಮ ಬೇಡಿಕೆಯಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net