ಮುಗಿಯದ ಓವರ್‌ಹೆಡ್ ಟ್ಯಾಂಕ್ ಕಾಮಗಾರಿ

ಓವರ್ ಹೆಡ್ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುತ್ತಿರುವುದು.
ಓವರ್ ಹೆಡ್ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • 6 ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ತೊಂದರೆ
  • ಕಾಮಗಾರಿ ಮುಕ್ತಯಕ್ಕೂ ಮುನ್ನವೇ ಸೋರಿಕೆ
  • 5 ವರ್ಷವಾದರೂ ಮುಗಿಯದ ಕಾಮಗಾರಿ
ಚಾಮರಾಜನಗರ: ಕಳೆದ ಐದು ವರ್ಷಗಳ ಹಿಂದೆ ಪ್ರಾರಂಭವಾದ ಓವರ್‌ಹೆಡ್ ಟ್ಯಾಂಕ್ ಕಾಮಗಾರಿ ಇನ್ನೂ ಮುಕ್ತಾಯಗೊಳ್ಳದೇ, ಹಲವಾರು ವಾರ್ಡ್‌ಗಳ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ.
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಲಾರಿ ನಿಲ್ದಾಣದ ಬಳಿ ನಗರಸಭೆ ವ್ಯಾಪ್ತಿಯ 9,10, 11, 12, 13 ಹಾಗೂ 14ನೇ ವಾರ್ಡ್‌ಗಳಿಗೆ ನೀರು ಪೂರೈಸಲು 10 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹಾಗಾರ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಸುಮಾರು ಮೂರು ದಶಕಗಳ ಹಿಂದೆ ನಿರ್ಮಾಣಮಾಡಿದ್ದ ಟ್ಯಾಂಕ್ ಶಿಥಿಲಗೊಂಡು, ಅದನ್ನು ಕೆಡವಲಾಯಿತು. ಅದೇ ಜಾಗದಲ್ಲಿ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ನಗರೋತ್ಥಾನ ಮೂರನೇ ಹಂತದಲ್ಲಿ 2.50 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿತ್ತು. 15 ಲಕ್ಷ ಲೀಟರ್‌ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ಅನ್ನು ನಿಗದಿತ ಸಮಯದಲ್ಲಿ ನಿರ್ಮಿಸಿಕೊಡುವಂತೆ ಎಸ್.ಆರ್.ಕನ್‌ಸ್ಟ್ರಕ್ಷನ್ ಕಂಪನಿಗೆ ವಹಿಸಲಾಗಿತ್ತು. 2021ರ ಮೇ 30ರಂದು ನಗರಸಭೆಯಿಂದ ಗುತ್ತಿಗೆದಾರರಿಗೆ ಕಾಮಗಾರಿ ನಡೆಸುವ ಕಾರ್ಯಾದೇಶ ಪತ್ರ ನೀಡಲಾಯಿತು. ಜು.29 ರಂದು ವಾರ್ಡ್ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ಗುದ್ದಲಿಪೂಜೆಯನ್ನು ನೆರವೇರಿಸಲಾಗಿತ್ತು. ಆದರೆ ಓವರ್‌ಹೆಡ್ ಟ್ಯಾಂಕ್ ಕಾಮಗಾರಿ ಇಂದಿಗೂ ಮುಕ್ತಾಯಗೊಳ್ಳದೇ ಬಡಾವಣೆ ನಿವಾಸಿಗಳ ಮನೆಗಳಿಗೆ ಪೂರ್ಣಪ್ರಮಾಣದಲ್ಲಿ ಕಾವೇರಿ ನೀರು ಸರಬರಾಜು ಆಗದೇ, ನಿವಾಸಿಗಳು ಪರದಾಡುವಂತಾಗಿದೆ. ಇತ್ತೀಚೆಗೆ ಓವರ್ ಹೆಡ್‌ಟ್ಯಾಂಕ್‌ಗೆ ಪ್ರಾಯೋಗಿಕವಾಗಿ ನೀರು ತುಂಬಿಸಲಾಗಿತ್ತು. ಆದರೆ ಟ್ಯಾಂಕ್‌ನಲ್ಲಿ ಹೆಚ್ಚಿನ ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
5 ವರ್ಷವಾದರೂ ಮುಗಿಯದ ಕಾಮಗಾರಿ:
ನಗರಸಭೆ ವತಿಯಿಂದ 2021 ರ ಸೆ.24 ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಂದೋ ಅಥವಾ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಬಡಾವಣೆ ನಿವಾಸಿಗಳಿಗೆ ಟ್ಯಾಂಕ್ ಮೂಲಕ ಸಮರ್ಪಕ ನೀರು ಪೂರೈಕೆ ಮಾಡಬಹುದಿತ್ತು. ಆದರೆ ಕಾಮಗಾರಿಯನ್ನು ಕೈಗೆತ್ತಿಕೊಂಡು, 05 ವರ್ಷಗಳೇ ಕಳೆದರೂ, ಟ್ಯಾಂಕ್ ಮೂಲಕ ಬಡಾವಣೆ ನಿವಾಸಿಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸುಮಾರು 06 ವಾರ್ಡ್‌ಗಳ ನಿವಾಸಿಗಳು ನಗರಸಭೆ ಮತ್ತು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೇಸಿಗೆಗೂ ಮುನ್ನವೇ ಹಲವಾರು ವಾರ್ಡ್‌ಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಆದಷ್ಟು ಬೇಗ ಓವರ್‌ಹೆಡ್ ಟ್ಯಾಂಕ್ ಸಾರ್ವಜನಿಕರ ಅನುಕೂಲಕ್ಕೆ ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈಗಲೇ ಸೋರುತ್ತಿದೆ:
ಕಳೆದ 4-5 ವರ್ಷಗಳಿಂದಲೂ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇದ್ದು, ಇತ್ತೀಚೆಗೆ ಕಾಮಗಾರಿ ಮುಕ್ತಾಯವಾಗಿದ್ದು, ಈಗಲೇ ಟ್ಯಾಂಕ್ ಸಂಪೂರ್ಣವಾಗಿ ಸೋರುತ್ತಿದೆ. ಟ್ಯಾಂಕ್‌ಗೆ ಪ್ರಾಯೋಗಿಕವಾಗಿ ನೀರು ತುಂಬಿಸಿ ಪರಿಶೀಲನೆ ಮಾಡಲಾಗಿದ್ದು, ನೀರು ಸುತ್ತಲೂ ನೀರು ಸೋರಿಕೆಯಾಗುತ್ತಲೇ ಇದೆ. ಈ ಕಾರಣದಿಂದ ಗುತ್ತಿಗೆದಾರನಿಗೆ ನೀಡಬೇಕಾದ 62 ಲಕ್ಷ ರೂ, ಅನುದಾನವನ್ನು ತಡೆ ಹಿಡಿಯಲಾಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ನಡೆಸಿ ನೀರು ಸೋರಿಕೆಯನ್ನು ತಡೆಗಟ್ಟಿ, ಟ್ಯಾಂಕ್ ಸಾರ್ವಜನಿಕರ ಉಪಯೋಗಕ್ಕೆ ದೊರಕುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಿವಾಸಿಗಳಿಗೆ ತೊಂದರೆ:
ನಗರಸಭೆ ವ್ಯಾಪ್ತಿಯ 9,10, 11, 12, 13 ಹಾಗೂ 14 ನೇ ವಾರ್ಡಿನಲ್ಲಿ ಸುಮಾರು 25 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದ್ದು, ಸಮರ್ಪಕವಾಗಿ ನೀರು ಸರಬರಾಜು ಆಗದೇ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬಡಾವಣೆ ನಿವಾಸಿಗಳಿಗೆ ನೀರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ತಿ.ನರಸೀಪುರದಿಂದ ನಗರಕ್ಕೆ ಅಳವಡಿಸಲಾಗಿರುವ ಪೈಪ್‌ಲೈನ್ ಮೂಲಕ ನೇರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಓವರ್ ಹೆಡ್ ಟ್ಯಾಂಕ್‌ನಲ್ಲಿ ಸಂಗ್ರಹವಾಗುವ ನೀರು ಬಡಾವಣೆ ನಿವಾಸಿಗಳಿಗೆ ಸಮರ್ಪಕವಾಗಿ ಸಿಗುತ್ತಿತ್ತು. ಪ್ರಸ್ತುತ ಕಾಮಗಾರಿ ಮುಕ್ತಾಯವಾಗಿ ಓವರ್‌ಹೆಡ್ ಟ್ಯಾಂಕ್ ಮೂಲಕ ನೀರು ಪೂರೈಕೆಯಾಗುವವರೆಗೆ ಸಮಸ್ಯೆ ತಪ್ಪಿದ್ದಲ್ಲ ಎಂದು ಬಡಾವಣೆಯ ನಿವಾಸಿಗಳು ಅಳಲು ತೋಡಿಕೊಂಡರು.
ನಗರಸಭೆ ವ್ಯಾಪ್ತಿಯ 6 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಇನ್ನೂ ಮುಕ್ತಯವಾಗದೇ ಸಾರ್ವಜನಿಕರು ನೀರಿಗೆ ಪರದಾಡುವಂತಾಗಿದೆ. ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
-ದುಷ್ಯಂತ್, 13ನೇ ವಾರ್ಡ್ ನಿವಾಸಿ, ಚಾಮರಾಜನಗರ
ಓವರ್‌ಹೆಡ್ ಟ್ಯಾಂಕ್ ಕಾಮಗಾರಿ ಕಳಪೆಯಿಂದ ಕೂಡಿದ್ದು, ಈಗಾಗಲೇ ನೀರು ಸೋರಿಕೆಯಾಗುತ್ತಿದೆ. ಗುತ್ತಿಗೆದಾರರು ಸಮರ್ಪಕವಾಗಿ ಕಾಮಗಾರಿ ನಡೆಸದಿದ್ದರೇ, ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ.
-ಅಬ್ರಾರ್ ಅಹಮ್ಮದ್, ಮಾಜಿ ಸದಸ್ಯ, ನಗರಸಭೆ, ಚಾಮರಾಜನಗರ
ಗುತ್ತಿಗೆದಾರರು ಪ್ರಾಯೋಗಿಕವಾಗಿ ಟ್ಯಾಂಕ್‌ಗೆ ನೀರು ತುಂಬಿಸಿದ್ದು, ನೀರು ಸೋರಿಕೆಯಾಗುತ್ತಿದೆ. ಆಗಾಗಿ ಅದನ್ನು ಸರಿಪಡಿಸುವವರೆಗೂ ಸುಮಾರು 62 ಲಕ್ಷ ರೂ, ಅನುದಾನ ತಡೆಹಿಡಿಯಲಾಗಿದೆ. ಗುತ್ತಿಗೆದಾರರು ಕಾಮಗಾರಿಗೆ ಮುಂದಾಗಿದ್ದು,ಸಮರ್ಪಕವಾಗಿ ಕೆಲಸ ಮಾಡಿದ ಬಳಿಕ ಹಸ್ತಾಂತರ ಮಾಡಿಕೊಳ್ಳತ್ತೇವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net