ಹನೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಾಕ್ಕೆ ತಾಲೂಕು ಪಂಚಾಯಿತಿ ಇಒ ಉಮೇಶ್ ಚಾಲನೆ ನೀಡಿದರು. ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ವ್ಯವಸ್ಥಾಪಕ ರಮೇಶ್, ಪಿಡಿಒಗಳಾದ ರಾಮು, ಸುರೇಶ್, ಮಾದೇಶ್ ಇತರರು ಇದ್ದರು.
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಅರಿವಿಗೆ ಹನೂರಿನಲ್ಲಿ ಜಾಥಾ
ಹನೂರು: ಅರ್ಹ ನಾಗರಿಕರು ಮತದಾನದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಾಲೂಕು ಪಂಚಾಯಿತಿ ಇಒ ಉಮೇಶ್ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ಸ್ವೀಪ್ ಸಮಿತಿ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಎಸ್‌ಐಆರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾರರ ಪರಿಶುದ್ಧ ಪಟ್ಟಿಯು ಸದೃಢ ಪ್ರಜಾಪ್ರಭುತ್ವಕ್ಕೆ ಅಡಿಪಾಯ. ಸುವ್ಯವಸ್ಥೆಯ ಚುನಾವಣೆಗೆ ಸಹಕಾರಿಯಾಗಿದೆ. ಹಾಗಾಗಿ ಸರ್ಕಾರ ಕೈಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆಯು ನಗರೀಕರಣ, ವಲಸೆಯಿಂದ ಉಂಟಾದ ಸಮಸ್ಯೆಯನ್ನು ಸರಿಪಡಿಸಲು, ಮೃತ ಹಾಗೂ ನಕಲಿ ಮತದಾರರನ್ನು ಪಟ್ಟಿಯಿಂದ ಕೈ ಬಿಡಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಮತಪಟ್ಟಿ ಪರಿಷ್ಕರಣೆಯ ಕಾರ್ಯವು ಜೂ.30ರಿಂದಲೇ ಆರಂಭವಾಗಿದೆ. ಜು. 29ರವರೆಗೆ ನಡೆಯಲಿದೆ. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ನೀಡುವ ಗಣತಿ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ನಮೂದಿಸಿ ಎಂದು ಅವರು ಸಲಹೆ ನೀಡಿದರು.
ಸರ್ಕಾರದ ಈ ಕಾರ್ಯದ ಉದ್ದೇಶವನ್ನು ಪ್ರತಿಯೊಬ್ಬರೂ ಅರಿಯಬೇಕು. ಸೂಚನೆಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಇತರರಿಗೂ ತಿಳಿಸುವ ಮೂಲಕ ಮನೆ ಬಾಗಿಲಿಗೆ ಬರುವ ಸಿಬ್ಬಂದಿಗೆ ಸಹಕರಿಸಬೇಕು ಎಂದು ಅವರು ವಿನಂತಿಸಿದರು.
ತಾಪಂ ಕಚೇರಿ ಮುಂಭಾಗದಿಂದ ಎಸ್‌ಐಆರ್ ಸೂಚನೆಗಳ ನಾಮ ಫಲಕವನ್ನು ಹಿಡಿದು ಹೊರಟ ಅಧಿಕಾರಿಗಳು, ಪಿಡಿಒಗಳು, ನೌಕರರು ಹಾಗೂ ಎನ್‌ಆರ್‌ಎಲ್‌ಎಂ ಸಿಬ್ಬಂದಿ ಬಂಡಳ್ಳಿ ಹಾಗೂ ಮಲೆಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಘೋಷಣೆಯನ್ನು ಕೂಗುತ್ತಾ ಅಂಬೇಡ್ಕರ್ ವೃತ್ತಕ್ಕೆ ಸಾಗಿಬಂದರು. ಅಲ್ಲಿ ಮಾನವ ಸರಪಳಿ ರಚಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ವ್ಯವಸ್ಥಾಪಕ ರಮೇಶ್, ಪಿಡಿಒಗಳಾದ ರಾಮು, ಸುರೇಶ್, ಮಾದೇಶ್, ದೊರೆಯಾ ಹಾಗೂ ಇನ್ನಿತರರು ಇದ್ದರು.