ಮಾಸಾಶನ ಎರಡು ತಿಂಗಳು ಬಾಕಿ

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಇರುವ ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರ
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಇರುವ ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರ
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಕಲಾವಿದರ ಕೈ ಸೇರದ ಪಿಂಚಣಿವಿತರಣೆಯಾಗಿಲ್ಲ ಗುರುತಿನ ಚೀಟಿ
  • ಮಾಸಾಶನ ಪಡೆಯುತ್ತಿರುವ 188 ಕಲಾವಿದರು:
ಚಾಮರಾಜನಗರ: ‘ಚಲಾವಣೆಯಲ್ಲಿದ್ದರೆ ನಾಣ್ಯ, ಇಲ್ಲದಿದ್ದರೆ ನಗಣ್ಯ’ ಎನ್ನುವಂತೆ ಎಳೆ ವಯಸ್ಸಿನಲ್ಲಿ ವೇದಿಕೆ ಏರಿ ಅಬ್ಬರಿಸುವ ಕಲಾವಿದರು, ಇಳಿ ವಯಸ್ಸಿನಲ್ಲಿ ಅವಕಾಶಗಳ ಕೊರತೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಸಾಶನ ಒಂದೇ ಜೀವನಕ್ಕೆ ಆಧಾರವಾಗುತ್ತಿತ್ತು, ಸದ್ಯಕ್ಕೆ ಇದೂ ಸಹ ಎರಡು ತಿಂಗಳ ಬಾಕಿ ಉಳಿದುಕೊಂಡು ಸಂಕಷ್ಟಕ್ಕೆ ಸಿಲುಕಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 58-60 ವರ್ಷದ ಕಲಾವಿದರಿಗೆ 2500 ರೂ. ಮಾಸಿಕ ಪಿಂಚಣಿಯನ್ನು ನೀಡಲಾಗುತ್ತಿದೆ. ಇದನ್ನು ಪಡೆಯಲು 20 ವರ್ಷ ಕಲಾ ಸೇವೆ ಮಾಡಿರುವ ದಾಖಲೆ, ಪ್ರಮಾಣ ಪತ್ರಗಳನ್ನು ಕಲಾವಿದರು ಸಲ್ಲಿಸಬೇಕು. ಸಂದರ್ಶನ ಎದುರುಸಿ ಬಳಿಕ ಆಯ್ಕೆಯಾದವರಿಗೆ ಪಿಂಚಣಿ ನೀಡಲಾಗುತ್ತದೆ. ಇದು ಸಂಕಷ್ಟದಲ್ಲಿರುವ ಹಿರಿಯ ಕಲಾವಿದರಿಗೆ ನೆರವಾಗುತ್ತಿದೆ. ಆದರೆ ಈಗ ಸಕಾಲಕ್ಕೆ ಕೈ ಸೇರದೆ ತೊಂದರೆಯಾಗುತ್ತಿದೆ.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಏಪ್ರಿಲ್, ಮೇ, ಜೂನ್‌ನ ಮಾಸಾಶನ ಬಂದಿರಲಿಲ್ಲ. ಇದರ ನಡುವೆ ಏಪ್ರಿಲ್‌ನ ಮಾಸಾಶನವನ್ನು ಜೂನ್‌ನಲ್ಲಿ ಕಲಾವಿದರ ಬ್ಯಾಂಕ್ ಖಾತೆಗೆ ಹಾಕಲಾಯಿತು. ಆದರೆ ಇನ್ನುಳಿದಿರುವ ಮೇ ಮತ್ತು ಜೂನ್‌ನ ಮಾಸಾಶನ ಕಲಾವಿದರಿಗೆ ಕೊಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಇಳಿ ವಯಸ್ಸಿನಲ್ಲಿ ಕಲಾಸೇವೆ ಮಾಡಲು ಕಷ್ಟ ಪಡುವ, ಆರೋಗ್ಯ ಸಮಸ್ಯೆ ಇರುವ ಮತ್ತು ಅವಕಾಶಗಳ ಕೊರತೆಯನ್ನು ಎದುರಿಸುತ್ತಿರುವ ಕಲಾವಿದರು ಮಾಸಾಶನವನ್ನೇ ಎದುರು ನೀಡುತ್ತಿದ್ದಾರೆ. ಎರಡು ತಿಂಗಳ ಪಿಂಚಣಿ ಬಾರದೆ ಇರುವುದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟವೆಂದು ಗೋಳಾಡುತ್ತಿದ್ದಾರೆ.
ಮಾಸಾಶನ ಪಡೆಯುತ್ತಿರುವ 188 ಕಲಾವಿದರು:
ಜಿಲ್ಲೆಯಲ್ಲಿ ಒಟ್ಟು 188 ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. ಇದಕ್ಕೂ ಮೊದಲು ಮಾಸಾಶನ ಪಡೆಯುತ್ತಿರುವ ಕಲಾವಿದರ ಸಂಖ್ಯೆ 214 ಇತ್ತು. 26 ಕಲಾವಿದರು ಮರಣ ಹೊಂದಿದ್ದ ಹಿನ್ನೆಲೆಯಲ್ಲಿ ಅವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿ 188ಕ್ಕೆ ಇಳಿಯಿತು. ಚಾಮರಾಜನಗರ ತಾಲೂಕಿನಲ್ಲಿ 88, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನಲ್ಲಿ 73, ಗುಂಡ್ಲುಪೇಟೆ ತಾಲೂಕಿನಲ್ಲಿ 26, ಹನೂರು ತಾಲೂಕಿನಲ್ಲಿ ಒಬ್ಬರು ಮಾಸಾಶನ ಪಡೆಯುತ್ತಿದ್ದಾರೆ. ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಮಾಡಿಸದೆ ಇರುವ ಕೆಲವರಿಗೆ ಪಿಂಚಣಿ ತಲುಪದೆ ಅಡ್ಡಿಯಾಗಿದೆ. ಈ ವರ್ಷ 10 ಜನರಿಗೆ ಹೊಸದಾಗಿ ಮಾಸಾಶನ ಪಡೆಯುವ ಅವಕಾಶ ಒದಗಿಬಂದಿದೆ.
ಕಲಾವಿದರಿಗೆ ಸಿಗದ ಗುರುತಿನ ಚೀಟಿ:
ಕಲಾವಿದರ ವಿವರಗಳನ್ನು ಕ್ರೋಢಿಕರಿಸುವ ದೃಷ್ಟಿಯಿಂದ ಜಿಲ್ಲೆಯ ಕಲಾವಿದರ, ಕಲಾತಂಡಗಳ ಪಟ್ಟಿಯನ್ನು ತಯಾರಿಸಿ ಇವರಿಗೆ ಸೂಕ್ತ ಕಾರ್ಯಕ್ರಮಗಳನ್ನು ನೀಡಲು ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಗುರುತಿನ ಚೀಟಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಕನಿಷ್ಠ 5 ವರ್ಷ ಕಲಾ ಸೇವೆ ಮಾಡಿರುವ ಕಲಾವಿದರು, ಯೂಟ್ಯೂಬ್ ಲಿಂಕ್, ಪೋಟೋ, ಪ್ರಮಾಣಪತ್ರಗಳನ್ನು ಲಗತ್ತಿಸಬೇಕಾಗಿತ್ತು. ಜಿಲ್ಲೆಯಲ್ಲಿ ಅಂದಾಜು 3 ಸಾವಿರ ಕಲಾವಿದರಿದ್ದಾರೆ. ಇವರೆಲ್ಲರೂ ದಾಖಲೆಗಳನ್ನು ಹೊಂದಿಸಿ ಅರ್ಜಿ ಹಾಕಲು ಸಾಧ್ಯವಾಗಿಲ್ಲ. ಹಾಗಾಗಿ ಜಿಲ್ಲೆಯಲ್ಲಿ 1035 ಕಲಾವಿದರಿಗೆ ಗುರುತಿನ ಚೀಟಿಗಳು ಮಾತ್ರ ಬಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇನ್ನೂ ಗುರುತಿನ ಚೀಟಿಗಳ್ನು ವಿತರಣೆ ಮಾಡಿಲ್ಲ.
ದಾಖಲೆಗಳಿಲ್ಲದೆ ಯೋಜನೆ ಪಡೆಯಲಾಗುತ್ತಿಲ್ಲ:
ಹಲವು ಕಲಾವಿದರು ಮಾಸಾಶನ ಪಡೆಯಲು ಅರ್ಜಿ ಸಲ್ಲಿಸುವಾಗ ದಾಖಲೆಗಳನ್ನು ಒದಗಿಸಲಾಗದೆ ಯೋಜನೆಯಿಂದ ಹೊರಗುಳಿದಿದ್ದಾರೆ. ಜಿಲ್ಲೆಯು ಮೌಖಿಕ ಜಾನಪದ ಪರಂಪರೆಯ ತಾಣ. ಶ್ರೀಮಲೆ ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರರಂಗನಾಥಸ್ವಾಮಿಯ ಜಾನಪದ ಗೀತೆಗಳು ಇಲ್ಲಿ ಕಲಾವಿದರ ಕರುಳ ಕೂಗಾಗಿವೆ. ಅನಕ್ಷರಸ್ಥ ಕಲಾವಿದರ ನಾಲಿಗೆಯ ಮೇಲೆ ಜ್ಞಾನ ಭಂಡಾರ ಮನೆ ಮಾಡಿದೆ. ಆದರೆ ಇವರಿಗೆ ಲಿಖಿತ ರೂಪದ ದಾಖಲೆಗಳನ್ನು ಹೊಂದಿಸಿ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲ. 20 ವರ್ಷಗಳಿಗೂ ಹೆಚ್ಚು ಕಾಲ ಕಲಾಸೇವೆ ಸಲ್ಲಿಸಿದ್ದರೂ ಸೂಕ್ತ ದಾಖಲೆಗಳು ಇಲ್ಲದೆ ಮಾಸಾಶನಕ್ಕೆ ಅರ್ಜಿ ಸಲ್ಲಿಸೋಕೆ ಆಗಿಲ್ಲಿ.
ಅರ್ಜಿ ಹಾಕಿದರೆ ಪಿಂಚಣಿಗೆ ಕತ್ತರಿ:
ಮಾಸಾಶನಕ್ಕೆ ಅರ್ಜಿ ಸಲ್ಲಿಸುವ ಕಲಾವಿದರು ಬೇರೆ ಯೋಜನೆಯಡಿ ಪಿಂಚಣಿ ಪಡೆಯುತ್ತಿಲ್ಲವೆಂದು ಪ್ರಮಾಣ ಪತ್ರವನ್ನು ನೀಡಬೇಕು. ಬಳಿಕ ಅರ್ಜಿ ಸಲ್ಲಿಸಿ ಮಾಸಾಶನ ಪಡೆಯಲು ಅರ್ಹರಾಗಬೇಕು. ಅಲ್ಲಿಯವರೆಗೂ ಬೇರೆ ಪಿಂಚಣಿ ಬರುವುದಿಲ್ಲ. ಪಿಂಚಣಿ ಇಲ್ಲದ ದಿನಗಳಲ್ಲಿ ಜೀವನ ನಿರ್ವಹಣೆ ಕಷ್ಟವಾಗುವುದರಿಂದ ಕಲಾವಿದರು ಮಾಸಾಶನಕ್ಕೆ ಅರ್ಜಿ ಸಲ್ಲಿಸುವುದನ್ನು ದುಸ್ಸಾಹಸವೆಂದು ಭಾವಿಸುತ್ತಿದ್ದಾರೆ. ಮಾಸಾಶನ ದೊರೆತ ಬಳಿಕ ಬೇರೆ ಪಿಂಚಣಿಯ ಪ್ರಯೋಜನ ಪಡೆಯುವುದನ್ನು ಸರ್ಕಾರವೇ ಸ್ಥಗಿತಗೊಳಿಸಿದರೆ ಇನ್ನೂ ಅನೇಕ ಕಲಾವಿದರು ಮಾಸಾಶನ ಪಡೆದುಕೊಳ್ಳುತ್ತಾರೆ.
ಹನೂರಿನಲ್ಲಿ ಒಬ್ಬನೇ ಕಲಾವಿದ:
ಹನೂರು ತಾಲೂಕಿನಲ್ಲಿ ಮಾಸಾಶನ ಪಡೆಯುತ್ತಿರುವ ಹಿರಿಯ ಕಲಾವಿದರು ಒಬ್ಬರು ಮಾತ್ರ. ಹಾಗಾದರೆ ಇಲ್ಲಿ ಕಲಾವಿದರೇ ಇಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ. ಮಲೆ ಮಹದೇಶ್ವರರ ಜಾನಪದ ಹಾಸುಹೊಕ್ಕಾಗಿರುವ ಊರಿನಲ್ಲಿ ದೊಡ್ಡ ಕಲಾ ಬಳಗವೇ ಇದೆ. ಹಿರಿಯ ಕಲಾವಿದರ ದಂಡೇ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳಲ್ಲಿ ಹನೂರಿನ ಹಿರಿಯ ಕಲಾವಿದರು ಭಾಗವಹಿಸಿ ಕಲಾ ಪ್ರದರ್ಶಗಳನ್ನು ನೀಡುತ್ತಿದ್ದಾರೆ. ಆದರೆ ಇವರ ಬಳಿ ಸೂಕ್ತ ದಾಖಲೆಗಳು ಇಲ್ಲದೆ, ಬೇರೆ ಪಿಂಚಣಿ ಬಿಟ್ಟು ಮಾಸಾಶನಕ್ಕೆ ಅರ್ಜಿ ಸಲ್ಲಿಸುವ ಧೈರ್ಯ ಮಾಡಲಾಗದೆ ಕಲಾಸೇವೆಯ ಮಾಸಾಶನ ಪಡೆಯುತ್ತಿಲ್ಲ.
ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅನೇಕ ಬಡ ಕಲಾವಿದರಿಗೆ ಉಪಯೋಗವಾಗುವಂತೆ ಮಾಹಿತಿ ನೀಡಿ ಸಹಕರಿಸಬೇಕು. ಬೇರೆ ಜಿಲ್ಲೆಗಳಲ್ಲಿ ಕಲಾವಿದರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಇನ್ನೂ ವಿತರಣೆ ಮಾಡಿಲ್ಲ
ಎಸ್.ಗುರುರಾಜು, ತಮ್ಮಡಹಳ್ಳಿ, ಯುವ ಕಲಾವಿದ, ಚಾಮರಾಜನಗರ
ನಾನು ಮಾಸಾಶನವನ್ನೇ ನಂಬಿಕೊಂಡು ಬದುಕುತ್ತಿರುವ ಕಲಾವಿದ. ಪ್ರತಿ ತಿಂಗಳು ನಿಗದಿ ದಿನಾಂಕದಂದು ಮಾಸಾಶನ ನೀಡದೆ ಎರಡ್ಮೂರು ತಿಂಗಳಿಗೆ ಹಾಕಿದರೆ ಜೀವನ ಮಾಡುವುದಾದರೂ ಹೇಗೆ, ಇನ್ನು ಮುಂದಾದರೂ ಪ್ರತಿ ತಿಂಗಳು ಮಾಸಾಶನ ನೀಡುವಂತಾಗಲಿ.
ರಾಮಸಮುದ್ರ ಶಿವನಂಜಯ್ಯ,ರಂಗಭೂಮಿ ಹಿರಿಯ ಕಲಾವಿದ, ಚಾಮರಾಜನಗರ
ಎರಡು ತಿಂಗಳ ಮಾಸಾಶನವನ್ನು ಕಲಾವಿದರ ಬ್ಯಾಂಕ್ ಅಕೌಂಟ್‌ಗೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಕಲಾವಿದರಿಗೆ ಮಾಸಾಶನ ದೊರೆಯಲಿದೆ.
ರಾಜು, ಸಹಾಯಕ ನಿರ್ದೇಶಕ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net