ಪ್ರಾಮಾಣಿಕ, ನಿಸ್ವಾರ್ಥ ಸೇವೆಯೇ ನಿಜವಾದ ಭಕ್ತಿ

ಯಳಂದೂರು ಸಮೀಪದ ಗಂಗವಾಡಿ ಗ್ರಾಮದ ಶ್ರೀವೀರಭದ್ರೇಶ್ವರ ದೇಗುಲದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿವಲಿಂಗ, ಗಣಪತಿ ಮತ್ತು ಉಪ್ಪರಿಗೆ ಬಸವೇಶ್ವರರ ಬೆಳ್ಳಿ ಕವಚ ಧಾರಣೆ ಹಾಗೂ ಕೀರ್ತಿಶೇಷ ಶ್ರೀ ದುಗ್ಗಹಟ್ಟಿ ವೀರಭದ್ರಪ್ಪ ಸ್ಮಾರಕ ಭವನ ಉದ್ಘಾಟನಾ ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಮಾತನಾಡಿದರು.
ಯಳಂದೂರು ಸಮೀಪದ ಗಂಗವಾಡಿ ಗ್ರಾಮದ ಶ್ರೀವೀರಭದ್ರೇಶ್ವರ ದೇಗುಲದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿವಲಿಂಗ, ಗಣಪತಿ ಮತ್ತು ಉಪ್ಪರಿಗೆ ಬಸವೇಶ್ವರರ ಬೆಳ್ಳಿ ಕವಚ ಧಾರಣೆ ಹಾಗೂ ಕೀರ್ತಿಶೇಷ ಶ್ರೀ ದುಗ್ಗಹಟ್ಟಿ ವೀರಭದ್ರಪ್ಪ ಸ್ಮಾರಕ ಭವನ ಉದ್ಘಾಟನಾ ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • True devotion
ಯಳಂದೂರು: ಪ್ರಾಮಾಣಿಕ ಹಾಗೂ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ಮಾಡುವುದೇ ದೇವರಿಗೆ ನಾವು ಅರ್ಪಿಸುವ ನಿಜವಾದ ಭಕ್ತಿ. ಈ ದಿಸೆಯಲ್ಲಿ ಸಾಗಿದರೆ ಮಾತ್ರ ದೇವರು ಪ್ರಸನ್ನನಾಗುತ್ತಾನೆ. ಹಾಗಾಗಿ ಈ ಮಾರ್ಗದ ಅನುಸರಣೆ ಇಂದಿನ ಅಗತ್ಯ ಎಂದು ಸುತ್ತೂರು ವೀರ ಸಿಂಹಾಸನ ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಬುಧವಾರ ತಾಲೂಕಿನ ಗಂಗವಾಡಿ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿವಲಿಂಗ, ಗಣಪತಿ ಮತ್ತು ಉಪ್ಪರಿಗೆ ಬಸವೇಶ್ವರರ ಬೆಳ್ಳಿ ಕವಚ ಧಾರಣೆ ಹಾಗೂ ಕೀರ್ತಿ ಶೇಷ ಶ್ರೀ ದುಗ್ಗಹಟ್ಟಿ ವೀರಭದ್ರಪ್ಪ ಸ್ಮಾರಕ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ನಾವು ಕೆಲಸ ಮಾಡಿದಾಗ ಅದರಲ್ಲಿ ದೈವತ್ವದ ಗುಣಗಳನ್ನು ಪಡೆದುಕೊಳ್ಳಬಹುದು. ಸರ್ವ ದುಃಖ ನಿವಾರಣೆಗೆ ಪ್ರಾಮಾಣಿಕ ಸಮಾಜ ಸೇವೆಯೇ ಮದ್ದಾಗಿದೆ. ಈ ನಿಟ್ಟಿನಲ್ಲಿ ದುಗ್ಗಹಟ್ಟಿ ವೀರಭದ್ರಪ್ಪ ತಮ್ಮ ಜೀವನದುದ್ದಕ್ಕೂ ಇದನ್ನೇ ಅಳವಡಿಸಿಕೊಂಡಿದ್ದರು. ಮಠದೊಂದಿಗೆ ಅನ್ಯೋನ್ಯ ಸಂಪರ್ಕ ಹೊಂದಿದ್ದರು. ಅವರ ಅವಧಿಯಲ್ಲಿ ಅನೇಕ ಸಮಾಜ ಕಾರ್ಯಗಳು ಜರುಗಿವೆ. ಈಗ ಅವರ ಹಾದಿಯಲ್ಲೇ ಅವರ ಮಗ ಗಂಗಾಧರ ಸ್ವಾಮಿ ಸಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಈ ಮನುಕುಲ ಪವಿತ್ರವಾಗಬೇಕಾದರೆ ಭಗವಂತನ ಸ್ಮರಣೆ ಜತೆಗೆ ಸಮಾಜ ಸೇವೆ ಮಾಡಬೇಕು. ಬದುಕು ತೆರೆದ ಪುಸ್ತಕವಾಗಬೇಕು. ಆಗ ದೈವ ಬಲ ಹಾಗೂ ಗುರುಕುಲ ಲಭಿಸುತ್ತದೆ. ಸಮಾಜ ಸೇವೆ ನನಗಲ್ಲ ನಿನಗೆ ಎಂಬ ತತ್ವಕ್ಕೆ ಬದ್ಧರಾಗಿ ಯಾರಿಗೂ ತಿಳಿಯದಂತೆ ನಿರಂತರವಾಗಿರಬೇಕು ಎಂದರು.
ಶಾಸಕ ಎ.ಆರ್ ಕೃಷ್ಣಮೂರ್ತಿ ಮಾತನಾಡಿ, ನಮ್ಮ ತಾಲೂಕಿಗೆ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಕೊಡುಗೆ ಅಪಾರವಾಗಿದೆ. ಅವರು ತಾವು ಬದುಕಿರುವವರೆಗೂ ಸಮಾಜ ಸೇವೆಗೆ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದರು. ಈಗ ಅವರ ಮಕ್ಕಳು ಇದೇ ಕಾರ್ಯವನ್ನು ಮುಂದುವರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎಸ್. ವಿನಯ್ ಸಂಪಾದಕತ್ವದ ರುದ್ರಾಂಶ ಸಂಭೂತ ಶ್ರೀವೀರಭದ್ರೇಶ್ವರ ಕೃತಿಯನ್ನು ಬಿಡುಗಡೆ ಮಾಡಲಾಯಿತು. ದೇವನೂರು ದಾಸೋಹ ಮಠದ ಶ್ರೀಮಹಾಂತ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀಚನ್ನಬಸವ ಸ್ವಾಮೀಜಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ವಿ. ಗಂಗಾಧರಸ್ವಾಮಿ, ಜಿ.ವಿಶ್ವಾಸ್, ಡಿ.ಎಂ. ಅಂಕಿತಾ, ಜಿ. ಸುಹಾಸ್, ವಿ. ಮಲ್ಲಿಕಾರ್ಜುನಸ್ವಾಮಿ, ಸುಜಾತಾ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು, ಗಣ್ಯರು, ಮುಖಂಡರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net