ಗಿರಿಜನರು ಸುಶಿಕ್ಷಿತರಾಗಿ ಜೀವನ ರೂಪಿಸಿಕೊಳ್ಳಿರಿ

ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಉದ್ಘಾಟನೆ ಮಾಡಿದರು. ಬಿಂದ್ಯಾ, ಡಾ.ಸಿ.ಮಾದೇಗೌಡ, ರಂಗೇಗೌಡ, ಶೃತಿ, ಮಾದೇಶ್, ಕೋಣೂರೇಗೌಡ ಇತರರು ಇದ್ದರು.
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಉದ್ಘಾಟನೆ ಮಾಡಿದರು. ಬಿಂದ್ಯಾ, ಡಾ.ಸಿ.ಮಾದೇಗೌಡ, ರಂಗೇಗೌಡ, ಶೃತಿ, ಮಾದೇಶ್, ಕೋಣೂರೇಗೌಡ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ
  • ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಸಲಹೆ

ಚಾಮರಾಜನಗರ:

ಪ್ರಸ್ತುತ ಗಿರಿಜನರಲ್ಲಿ ಬೇರೆ ಸಮುದಾಯಗಳಿಗಿಂತಲೂ ಹೆಚ್ಚು ಸಂಘಟಿತ ಮನೋಭಾವ ಬೆಳೆದಿದೆ. ಇದರೊಂದಿಗೆ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರ ಜೀವನವನ್ನು ಉತ್ತಮವಾಗಿ ರೂಪಿಸುವ ಗುಣವನ್ನೂ ಬೆಳೆಸಿಕೊಳ್ಳಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಸಲಹೆ ನೀಡಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ 32ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತದಿಂದ ಆಯೋಜನೆ ಮಾಡುವ ಮಹನೀಯರ ದಿನಾಚರಣೆಗಳಿಗೆ ಸಭಿಕರ ಕೊರತೆ ಕಾಡುತ್ತದೆ. ಆದರೆ ಗಿರಿಜನರ ಕಾರ್ಯಕ್ರಮದಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಇದು ಆದಿವಾಸಿಗಳು ಸಂಘಟಿತರಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟ ಮಾಡಲು ಹೇಳಿದ್ದಾರೆ. ಅವರ ಧ್ಯೇಯದಂತೆ ಗಿರಿಜನರು ಸಂಘಟಿತರಾಗುವುದರ ಜತೆಗೆ ಶಿಕ್ಷಣವನ್ನು ಪಡೆಯಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳು ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಿಕೊಡುತ್ತದೆ. ಆದರೆ ಬದುಕು ರೂಪಿಸಿಕೊಳ್ಳಲು ಮಕ್ಕಳಿಗೆ ಶಿಕ್ಷಣ ಕೊಡಿಸಲೇಬೇಕು ಎಂದರು.
ಆದಿವಾಸಿಗಳು ಕುಡಿತದ ಚಟದಿಂದ ದೂರ ಉಳಿಯಬೇಕು. ಗಿರಿಜನರ ಭಾಷೆ, ಆಚಾರ, ವಿಚಾರ ವಿಶಿಷ್ಟವಾದ ಸಂಸ್ಕೃತಿಯಾಗಿದೆ. ಈ ಪರಂಪರೆಯನ್ನು ಉಳಿಸಲು ವಿಶ್ವ ಆದಿವಾಸಿ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಆಚರಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಅನುಸರಣೆಯಲ್ಲಿ ಇರಬೇಕು. ಮನೆಗಳಲ್ಲಿ ಹೆರಿಗೆ ತಪ್ಪಿಸಿ ತಾಯಿ-ಮಗು ಮರಣ ತಪ್ಪಿಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಕಾಡಿನ ಪೋಡುಗಳಲ್ಲಿ ಹೆರಿಗೆ ಮಾಡಿಸುವ ಜ್ಞಾನ ಹೊಂದಿರುವ ಸೂಲಗಿತ್ತಿಯರಿಗೆ ಬಹುಮಾನ ನೀಡುತ್ತಿರುವುದು ಖುಷಿಯ ವಿಚಾರ ಎಂದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಮಾತನಾಡಿ, ಇಂದಿನ ಯುವ ಪೀಳಿಗೆ ಸಂಘಟಿತರಾಗುವುದರಲ್ಲಿ ವಿಫಲವಾಗುತ್ತಿದೆ. ಜಿಲ್ಲೆಯಲ್ಲಿ ಬುಡಕಟ್ಟು ಸಂಘಟನೆಗಳು ಹೆಚ್ಚಾಗಿವೆ. ಸಂಘದವರು ವೈಯಕ್ತಿಕ ಲಾಭಕ್ಕೆ ಏನನ್ನೂ ಕೇಳಿಲ್ಲ. ಸಮುದಾಯದ ಹಿತಕ್ಕಾಗಿ ಮನವಿಗಳನ್ನು ಮಾಡುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಮನೆ ನೀಡಲು ಕ್ರಮವಹಿಸಲಾಗಿದೆ. ವಸತಿಗಾಗಿ ರಾಜ್ಯ ಸರ್ಕಾರಕ್ಕೆ ಮೊದಲ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಚಾಮರಾಜನಗರ ಜಿಲ್ಲೆಯಿಂದ ಎಂದು ಹೇಳಿದರು.
ಹಾಡಿಗಳಲ್ಲಿ ಶಾಲೆ ಬಿಟ್ಟ ಮಕ್ಕಳು ಕಾಣಸಿಗುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಕನಿಷ್ಟ ಪದವಿವರೆಗಾದರೂ ಓದಿಸಿ. ಪ್ರಸ್ತುತ ಆದಿವಾಸಿಗಳಲ್ಲಿ ನರ್ಸಿಂಗ್ ಮಾಡಿರುವವರು ಹೆಚ್ಚಾಗಿದ್ದಾರೆ. ಪೌಷ್ಟಿಕ ಆಹಾರ ವಿತರಣೆಗೆ ಟೆಂಡರ್ ಆಗಿದೆ. ವಿತರಣೆಯ ಕಾರ್ಯವಾಗಲಿದೆ. ಹಾಡಿಗಳಲ್ಲಿ ರಸ್ತೆಗಳ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.
ಇದೇ ವೇಳೆ ಸೂಲಗಿತ್ತಿಯರಾದ ಚಿಕ್ಕರಂಗಮ್ಮ, ಸರೋಜಮ್ಮ, ರಂಗಮ್ಮ, ಕಾನೆ ರಂಗಮ್ಮ, ಮಾದಮ್ಮ, ದೇವಮ್ಮ ಅವರಿಗೆ ಆದಿವಾಸಿ ರತ್ನ ಪ್ರಶಸ್ತಿ ನೀಡಿಗೌರವಿಸಲಾಯಿತು. ಇದೇ ವೇಳೆ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾಗೆ ಸಲ್ಲಿಕೆ ಮಾಡಿದರು.
ಜಿ.ಪಂ.ಉಪ ಕಾರ್ಯದರ್ಶಿ ಶೃತಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ರಂಗೇಗೌಡ, ಪ್ರೊ. ಸಿದ್ದಪ್ಪಶೆಟ್ಟಿ, ಮಾದೇಶ್, ಕೋಣೂರೇಗೌಡ, ದೊಡ್ಡಸಿದ್ದಯ್ಯ, ವೇದಮ್ಮ, ಮಾದು, ಪುಟ್ಟಮ್ಮ, ಜಡೆಸ್ವಾಮಿ, ಮುತ್ತಯ್ಯ ಮತ್ತು ಇತರರು ಹಾಜರಿದ್ದರು.

ಆದಿವಾಸಿಗಳ ಅದ್ಧೂರಿ ಮೆರವಣಿಗೆ:

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೋಮವಾರ ಬೆಳಗ್ಗೆ ಗುಂಪುಗೂಡಿದ ಆದಿವಾಸಿಗಳು ಇಲ್ಲಿಂದ ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣಕ್ಕೆ ಆಗಮಿಸಿದರು. ಮೆರವಣಿಗೆಯಲ್ಲಿ ಯುವಕ-ಯುವತಿಯರು ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ ಭಾವಚಿತ್ರ ಪ್ರದರ್ಶನ ಮಾಡಿ ಜೈಕಾರ ಕೂಗಿದರು.
ಅರಣ್ಯ ಹಕ್ಕು ಕಾಯ್ದೆಯಲ್ಲಿ ಹಲವು ಕುಟುಂಬಗಳಿಗೆ ಹಕ್ಕು ಪತ್ರ, ಸಮುದಾಯ ಪತ್ರ ದೊರೆತಿವೆ. ನಮಗೆ 5 ತಿಂಗಳಿನಿಂದ ಪೌಷ್ಟಿಕ ಆಹಾರ ದೊರೆತಿಲ್ಲ. ಆಹಾರ ಭದ್ರತೆ ನೀಡಿರುವ ಸರ್ಕಾರ ಇದನ್ನು ಒದಗಿಸಿಕೊಡಬೇಕು. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್‌ನಲ್ಲಿ ಘೋಷಣೆ ಮಾಡಿದಂತೆ ವಸತಿ ಸೌಲಭ್ಯ ನೀಡಬೇಕು. ಅನೇಕ ಹಾಡಿಗಳಲ್ಲಿ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ನೀಡಲಾಗುತ್ತಿದೆ.
ಡಾ.ಸಿ.ಮಾದೇಗೌಡ,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net