ಯಳಂದೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಮೂರು ವರ್ಷ ತುಂಬಿರುವ ಸಂದರ್ಭದಲ್ಲಿ ತಾಲೂಕಿನ ಗುಂಬಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮುಂಭಾಗ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ನುಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆಯು ಪ್ರಥಮವಾಗಿದ್ದು, ಇದೇ ವರ್ಷದ ಜು.19ಕ್ಕೆ ಮೂರು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಇದನ್ನು ನೆನಪಿನಲ್ಲಿ ಉಳಿಯಬೇಕೆಂದು ಗಿಡಗಳನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಗಿಡನೆಡುವ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಇದುವರೆವಿಗೂ 62 ಸಾವಿರ ರೂ. ಜಮೆಯಾಗಿವೆ. ನಮ್ಮ ತಾಲೂಕಿನಲ್ಲಿ 22,460 ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಕೆಲವರು ಇಲ್ಲಸಲ್ಲದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಫಲಾನುಭವಿಗಳು ಅಲ್ಲದವರಿಗೂ ಇದು ಸಿಗುತ್ತಿತ್ತು. ಹಾಗಾಗಿ ಇದನ್ನು ಮರು ಪರಿಶೀಲನೆ ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆಯೇ ಹೊರತು ನಮ್ಮ ಸರ್ಕಾರ ಇರುವ ತನಕವೂ ಈ ಯೋಜನೆಗಳು ನಿಲ್ಲುವುದಿಲ್ಲ ಎಂದರು.
ಸಿಡಿಪಿಒ ಎಸ್.ಎನ್.ಶಿವಪ್ರಕಾಶ್ ಮಾತನಾಡಿ, ಗ್ಯಾರಂಟಿ ಯೋಜನೆಗೆ ಮೂರು ವರ್ಷ ಸಂದ ನೆನಪಿನಲ್ಲಿ ಗಿಡ ನೆಡುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಈ ಯೋಜನೆಯಿಂದ ನಮ್ಮ ರಾಜ್ಯದ ಜನರ ಅರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಅನೇಕ ಕುಟುಂಬಗಳಿಗೆ ಇದರ ನೆರವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಸೊಪ್ಪು, ಹಣ್ಣುಗಳ ಗಿಡಗಳನ್ನು ನೆಡಲಾಗುತ್ತಿದೆ. ಇದನ್ನು ಪೋಷಿಸುವ ನಿಟ್ಟಿನಲ್ಲಿ ನಾವು ಸಂಬಂಧಪಟ್ಟ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸೂಚನೆ ನೀಡುತ್ತೇವೆ ಎಂದರು.
ಇಒ ಎ.ಬಿ.ವೇಣು ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ವಿರೂಪಾಕ್ಷ, ಮಂಜುನಾಥ್ ತಾಪಂ ಮಾಜಿ ಸದಸ್ಯ ಭಾಗ್ಯಾ ನಂಜಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸರಸ್ವತಿ, ಸೆಸ್ಕ್‌ನ ಎಇಇ ಲಿಂಗರಾಜು, ಪಿಡಿಒ ಮಂಜುನಾಥ್, ಕಿಟ್ಟಿ, ಗೋವಿಂದ ಮುಖಂಡರಾದ ಯರಗಂಬಳ್ಳಿ ಮಲ್ಲು, ರಾಜೇಶ್ ಅಂಗನವಾಡಿ ಕಾರ್ಯಕರ್ತೆಯರಾದ ಶೀಲಮ್ಮ, ಮಂಜುಳಾ, ಅಶ್ವಿನಿ, ಪುಟ್ಟಲಿಂಗಮ್ಮ, ಮದ್ದೂರು ಮಂಜುಳಾ, ಚಂದ್ರಿಕಾ ಇತರರು ಇದ್ದರು.