ಸೌದೆ ವ್ಯಾಪಾರ ಮಾಡಲು ಖರೀದಿಸಿದ ಮರ ಕಟಾವಿಗೆ ಸಕಾಲಕ್ಕೆ ಅನುಮತಿ ನೀಡದ ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ ಫೆ.11 ರಂದು ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಸೋಮವಾರ ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕು ಮರ ಮುಟ್ಟುಗಾರರ ಸಂಘದ ಪದಾಧಿಕಾರಿಗಳು ಕೊಳ್ಳೇಗಾಲ ಪಟ್ಟಣದಲ್ಲಿ ಸಮಾವೇ ಶಗೊಂಡಿದ್ದರು.
ಕೊಳ್ಳೇಗಾಲ:ಸೌದೆ ವ್ಯಾಪಾರ ಮಾಡಲು ಖರೀದಿಸಿದ ಮರ ಕಟಾವಿಗೆ ಸಕಾಲಕ್ಕೆ ಅನುಮತಿ ನೀಡದ ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ ಫೆ.11 ರಂದು ಪಟ್ಟಣದ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕು ಮರ ಮುಟ್ಟುಗಾರರ ಸಂಘ ತೀರ್ಮಾನಿಸಿದೆ.
ಪಟ್ಟಣದ ಕಾವೇರಿ ರಸ್ತೆಯಲ್ಲಿ ಪುಟ್ಟಣ್ಣ ಸೌದೆ ಮಾರಾಟದ ಡಿಪೋನಲ್ಲಿ ಸೋಮವಾರ 50 ಕ್ಕೂ ಹೆಚ್ಚು ಸೌದೆ ವ್ಯಾಪಾರಿಗಳು ಸಮಾವೇಶಗೊಂಡು ಚರ್ಚಿಸಿ ಅರಣ್ಯ ಇಲಾಖೆ ವಿರುದ್ಧ ಅಕ್ರೋಶ ಹೊರಹಾಕಿದರು. ಈ ವೇಳೆ ಸೌದೆ ವ್ಯಾಪಾರಿ ಮಹಮ್ಮದ್ ಮತೀನ್ ಮಾತನಾಡಿ, ಕಳೆದ 40 ವರ್ಷದಿಂದ ಕೊಳ್ಳೇಗಾಲದಲ್ಲಿ 50ಕ್ಕೂ ಹೆಚ್ಚು ಜನರು ಸೌದೆ ವ್ಯಾಪಾರವನ್ನು ಮಾಡಿಕೊಂಡಿದ್ದು, ಸೌದೆ ಡಿಪೋ ಗಳಲ್ಲಿ ನೂರಾರು ಜನರು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ರೈತರು ಮಾರಾಟ ಮಾಡಿದ ಸಣ್ಣಪುಟ್ಟ ಮರಗಳನ್ನು ಖರೀದಿಸಿ ಸೌದೆ ವ್ಯಾಪಾರ ನಡೆಸುತ್ತಿದ್ದೇವೆ. ಪ್ರಸ್ತುತ ಸೌದೆ ವ್ಯಾಪಾರ ಉತ್ತಮ ರೀತಿಯಲ್ಲಿ ನಡೆಯುತ್ತಿಲ್ಲ. ಈ ಸಂಕಷ್ಟದ ನಡುವೆಯೂ ಜೀವನ ಸಾಗಿಸಲು ವೃತ್ತಿ ಮಾಡುತ್ತಿದ್ದೇವೆ. ಶವ ಸಂಸ್ಕಾರ ಸೇರಿದಂತೆ ಇನ್ನಿತರ ಉಪಯೋಗಕ್ಕೆ ಸೌದೆ ನೀಡಲಾಗುತ್ತಿದೆ. ಆದರೆ, ಕಳೆದ ಮೂರು ತಿಂಗಳಿನಿಂದ ಸೌದೆ ವ್ಯಾಪಾರಿಗಳಿಗೆ ಅರಣ್ಯ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ನಿಯಮದಂತೆ ರೈತರು ಮರ ಕಟಾವಿಗೆ ಅರ್ಜಿ ಸಲ್ಲಿಸಿದರೂ ಇಲಾಖೆ ಅನುಮತಿ ನೀಡಲು ವಿಳಂಬ ಮಾಡುತ್ತಿದೆ. ಸಕಾಲಕ್ಕೆ ಅನುಮತಿ ಸಿಗದಿದ್ದರೆ ರೈತರು ಮಾರಾಟ ಮಾಡಿದ ಮರಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನಾವೇನು ಕಾಡು ಮರವಾಗಲಿ, ಬೆಲೆ ಬಾಳುವ ಮರವಾಗಲಿ ಕತ್ತರಿಸುತ್ತಿಲ್ಲ. ರೈತರು ಮಾರಿದ ಸಣ್ಣ ಮರಗಳನ್ನು ಖರೀದಿಸುತ್ತಿದ್ದೇವೆ. ಕಟಾವಿಗೆ ಅರಣ್ಯ ಇಲಾಖೆ ಅನುಮತಿ ನೀಡದೆ ತೊಂದರೆ ನೀಡುತ್ತಿದೆ. ಈ ವೃತ್ತಿಯನ್ನೇ ನಂಬಿ ನೂರಾರು ಕುಟುಂಬಗಳು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಅರ್ಜಿ ಸಲ್ಲಿಸಿದ 8 ದಿನಕ್ಕೆ ಕಾನೂನಿನಂತೆ ನಮಗೆ ಅವಕಾಶವನ್ನು ನೀಡಬೇಕು ಎಂದು ಒತ್ತಾಯಿಸಿ ಫೆ.11 ರಂದು ಡಿಸಿಎಫ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.