ಈ ಮಾರ್ಗದಲ್ಲಿ ಸಂಚಾರ ಅಸಾಧ್ಯ!

ಯಳಂದೂರು ತಾಲೂಕಿನ ಕೊಮಾರನಪುರ ಗ್ರಾಮದ ರಸ್ತೆಯ ದುಸ್ಥಿತಿ.
ಯಳಂದೂರು ತಾಲೂಕಿನ ಕೊಮಾರನಪುರ ಗ್ರಾಮದ ರಸ್ತೆಯ ದುಸ್ಥಿತಿ.
Published on

ಪ್ರಮುಖ ಮುಖ್ಯಾಂಶಗಳು

  • ಕೊಮಾರನಪುರ- ಗುಂಬಳ್ಳಿ ಮುಖ್ಯ ರಸ್ತೆಯ ದುಸ್ಥಿತಿ ಹೇಳತೀರದು
ಯಳಂದೂರು: ಹಲ್ಲಿದ್ದರೆ ಕಡಲೆಯಿಲ್ಲ...ಕಡಲೆಯಿದ್ದರೆ ಹಲ್ಲಿಲ್ಲ.. ಎಂಬ ಗಾದೆ ಮಾತು ತಾಲೂಕಿನ ಕೆಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಅನ್ವಯವಾಗಲಿದ್ದು, ಅಂತಹದ್ದೊಂದು ಉದಾಹರಣೆ ಇಲ್ಲಿದೆ.
ಈ ರಸ್ತೆಗೆ ಅನುದಾನ ಇದ್ದರೂ ಕಳೆದ 5 ವರ್ಷದಿಂದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರು ಕೆಲಸ ಮಾಡದ ಪರಿಣಾಮ ಅಪೂರ್ಣವಾದ ರಸ್ತೆಯಲ್ಲಿ ವಾಹನ ಸವಾರರು ಸಂಚಾರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.!
ಹೌದು ತಾಲೂಕಿನ ಕೊಮಾರನಪುರ ಗ್ರಾಮದಿಂದ ಗುಂಬಳ್ಳಿ ಗ್ರಾಮದ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುವ ಸರಿ ಸುಮಾರು ಎರಡು ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಪಂಚಾಯತ್ ರಾಜ್ ಇಲಾಖೆ ಕೈಗೊತ್ತಿಕೊಂಡಿದ್ದು, ಇದಕ್ಕಾಗಿ 2.ಕೋಟಿ ರೂ ಅನುದಾನ ಲಭ್ಯವಿದೆ. ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಹಲವು ತಿಂಗಳು ಕಳೆದರೂ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳದ ಪರಿಣಾಮ ಇದೀಗ ಸವಾರರಿಗೆ ಸಂಕಷ್ಟ ಎದುರಾಗಿದೆ. ಕಳೆದ ಹಲವು ವರ್ಷಗಳ ಹಿಂದೆ ರಸ್ತೆಯನ್ನು ಮಾಡಬೇಕಾಗಿತ್ತು. ಆದರೆ ಗುತ್ತಿಗೆದಾರನ ನಿರ್ಲಕ್ಷೃದಿಂದ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಅರ್ಧಂಬರ್ಧವಾಗಿ ಮಾಡಿರುವ ಪರಿಣಾಮ ಗ್ರಾಮೀಣ ಜನರು ಗುಂಡಿಬಿದ್ದ ರಸ್ತೆಯಲ್ಲಿಯೇ ಸಂಚಾರ ಮಾಡುವ ಸ್ಥಿತಿ ಇದೆ.
ತಾಲೂಕಿನ ಕೊಮಾರನಪುರ ಗ್ರಾಮದಿಂದ ವಡಗೆರೆ, ಬಿಳಿಗಿರಿರಂಗನಬೆಟ್ಟ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದಾರಿ ಇದಾಗಿದೆ. ಈ ಮಾರ್ಗವು ಸಂಪೂರ್ಣ ಹಾಳಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಜಾರಿಬಿ ದ್ದು ಗಾಯಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಶಾಲಾ-ಕಾಲೇಜು ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ತುರ್ತು ಸೇವೆಗೆ ಹೋಗುವ ರೋಗಿಗಳು ಈ ಮಾರ್ಗದಲ್ಲಿ ಸಂಚರಿಸಬೇಕಾದರೆ ಪರದಾಡುವಂತಾಗಿದೆ. ಇನ್ನು ಆಟೋ, ಕಾರು ಮತ್ತು ಬಸ್ ಸಂಚಾರಿಸಬೇಕಾದರೆ ಪ್ರಾಯಾಸ ಪಡುವಂತಾಗಿದೆ.
ತಾಲೂಕಿನ ಕೊಮಾರನಪುರ ಗ್ರಾಮಕ್ಕೆ ಗುಂಬಳ್ಳಿ ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕಳೆದ 20 ವರ್ಷಗಳಿಂದಲೂ ನನೆಗುದಿಗೆ ಬಿದ್ದಿತ್ತು. ಕಳೆದ 2021-22 ನೇ ಸಾಲಿನಲ್ಲಿ ಅಂದಿನ ಶಾಸಕರಾದ ಎನ್.ಮಹೇಶ್ ಅವರ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಂದಿದ್ದು, ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ಹಣ ಮತ್ತೆ ಸರ್ಕಾರಕ್ಕೆ ವಾಪಸ್ಸಾಗಿತ್ತು. ಆ ಬಳಿಕ ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಎ.ಆರ್.ಕೃಷ್ಣಮೂರ್ತಿ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ಸಂಬಂಧ ಮನವಿ ಮಾಡಲಾಗಿ, ರಸ್ತೆ ಅಭಿವೃದ್ಧಿಗೆ ಮತ್ತೆ 2 ಕೋಟಿ ರೂ. ಅನುದಾನ ತಂದು 2025 ರ ಮಾ.2ರಂದು ಭೂಮಿಪೂಜೆ ನೆರವೇರಿಸಿದ್ದರು. ಇದೀಗ ಕಾಮಗಾರಿಗೆ ಚಾಲನೆ ನೀಡಿ ವರ್ಷ ಕಳೆದಿದ್ದು, ಗುತ್ತಿಗೆದಾರ ರಸ್ತೆಯ ಕಲ್ಲುಗಳನ್ನು ಜೆಸಿಬಿ ಯಂತ್ರದಿಂದ ಕಿತ್ತು ಹಾಕಿಸಿ ನಂತರ ರಸ್ತೆಗೆ ಕಲ್ಲು ಹಾಗೂ ಮಣ್ಣನ್ನು ಹಾಕಿ ಸಮತಟ್ಟು ಮಾಡಿ ಹೋಗಿದ್ದಾರೆ. ಆದರೆ ರಸ್ತೆಗೆ ಹಾಕಿರುವ ಕಲ್ಲುಗಳ ಕಿತ್ತು ಹೋಗಿದ್ದು ಡಾಂಬರು ಕಾಮಗಾರಿಯನ್ನು ಈವರೆಗೂ ಕೈಗೊತ್ತಿಕೊಂಡಿಲ್ಲ. ಪ್ರಸ್ತುತ ಬೇಸಿಗೆ ಸಮಯವಾಗಿರುವುದರಿಂದ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ಧೂಳು ಮೇಲೇಳಲಿದ್ದು, ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.
ಸಂಬಂಧಪಟ್ಟ ಇಲಾಖೆಯ ದಿವ್ಯ ನಿರ್ಲಕ್ಷೃದಿಂದಾಗಿ ರಸ್ತೆ ಈವರೆಗೂ ಅಭಿವೃದ್ಧಿ ಕಂಡಿಲ್ಲ. ಅಭಿವೃದ್ಧಿಗೆ ಅನುದಾನವಿದ್ದರೂ ಸಂಬಂಧಪಟ್ಟ ಇಲಾಖೆಯವರ ನಿರಾಸಕ್ತಿಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ಉಸ್ತುವಾರಿ ಹೊತ್ತಿರುವ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ವಹಿಸದಿರುವುದು ಕಾಮಗಾರಿ ನನೆಗುದಿಗೆ ಬೀಳಲು ಕಾರಣವಾಗಿದೆ. ಈ ನಡುವೆ ಈ ಮಾರ್ಗದಲ್ಲಿ ಖಾಸಗಿ ಬಸ್, ಕಾರು, ಆಟೋಗಳು ಈ ಮಾರ್ಗದಲ್ಲಿ ಸಂಚಾರಿಸುವುಕ್ಕೆ ಹಿಂದೇಟು ಹಾಕುತ್ತಿವೆ. ಇನ್ನು ಈ ಮಾರ್ಗದಲ್ಲಿ ಪ್ರಮುಖ ಸ್ಥಳಗಳಾದ ಬಿಳಿಗಿರಿರಂಗನಬೆಟ್ಟ ದೇವಸ್ಥಾನ ಹಾಗೂ ವಡಗೆರೆ ಬಿದ್ದ ಆಂಜನೆಯ ಸ್ವಾಮಿ ದೇವಸ್ಥಾನಗಳಿದ್ದು, ಈ ಮಾರ್ಗವಾಗಿಯೇ ತೆರಳಬೇಕಿದೆ. ಆದರೆ ರಸ್ತೆ ದುಸ್ಥಿತಿಯಲ್ಲಿರುವ ಪರಿಣಾಮ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಜನರು ಹಾಗೂ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಜನರಿಗೆ ಈ ಕೂಡಲೇ ಅನುಕೂಲ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net