ತಾಲೂಕಿನ ಮಾರ್ಗವಾಗಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಬೆಳೆದಿರುವ ಸೂರ್ಯಕಾಂತಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ತಾಲೂಕಿನ ಮೂಲಕ ರಾಜ್ಯಕ್ಕೆ ಆಗಮಿಸುತ್ತಿದ್ದು ರಸ್ತೆ ಬದಿಗಳಲ್ಲಿ ಸೂರ್ಯಕಾಂತಿ ಜಮೀನು ಕಂಡಕೂಡಲೇ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಕೇರಳ ರಸ್ತೆಯ ಮದ್ದೂರು, ಮದ್ದಯ್ಯನಹುಂಡಿ, ಭೀಮನಬೀಡು, ಕೂತನೂರು, ಊಟಿ ರಸ್ತೆಯ ಹಂಗಳ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ರಸ್ತೆ ಬದಿಯ ಜಮೀನುಗಳು, ಬಂಡೀಪುರ ರಸ್ತೆಯ ಕಲಿಗೌಡನಹಳ್ಳಿ ಗೇಟ್, ಬಸವಾಪುರ ಗೇಟ್, ಮಲ್ಲಯ್ಯನಪುರ ಗೇಟ್, ಮೈಸೂರು ರಸ್ತೆಯ ಮಳವಳ್ಳಿ, ಗರಗನಹಳ್ಳಿ, ರಾಘವಾಪುರ, ಬೇಗೂರು ಸಮೀಪ ಸಾಲುಸಾಲಾಗಿ ಕಾರುಗಳು ನಿಲ್ಲುತ್ತಿವೆ.