ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿಮರಿ ಸಾವು

ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿದಿಂದ ಸಾವಿಗೀಡಾದ ಹುಲಿಮರಿ.
ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿದಿಂದ ಸಾವಿಗೀಡಾದ ಹುಲಿಮರಿ.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನ ಪಡಗೂರು ಗ್ರಾಮದಲ್ಲಿ ಘಟನೆ
ಗುಂಡ್ಲುಪೇಟೆ: ತಾಲೂಕಿನ ಪಡಗೂರು ಗ್ರಾಮದಲ್ಲಿ ರೈತ ಬೆಳೆರಕ್ಷಣೆಗೆ ತನ್ನ ಜಮೀನಿನ ಬೇಲಿಗೆ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿಮರಿಯೊಂದು ಸಾವಿಗೀಡಾಗಿದೆ.
ಗ್ರಾಮದ ಮದ್ದಾನೇಶ್ವರ ಅಡವಿಮಠದ ಸಮೀಪವಿರುವ ರವಿಚಂದ್ರ ಎಂಬುವರು ತಮ್ಮ ಜಮೀನನ್ನು ಪರಮೇಶ್ವರಪ್ಪ ಎಂಬುವರಿಗೆ ಗುತ್ತಿಗೆಗೆ ನೀಡಿದ್ದ ಜಮೀನಿನಲ್ಲಿ ಬಾಳೆ ಬೆಳೆ ರಕ್ಷಿಸಲು ಬೇಲಿಗೆ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 16 ರಿಂದ 18 ತಿಂಗಳ ವಯಸ್ಸಿನ ಹೆಣ್ಣು ಹುಲಿಮರಿ ಸಾವಿಗೀಡಾಗಿದೆ.
ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವನ್ಯಜೀವಿಗಳಿಂದ ರೈತರ ಸಾಕುಪ್ರಾಣಿಗಳು ಸಾವಿಗೀಡಾಗುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಅಲ್ಲಲ್ಲಿ ಬೋನ್ ಇರಿಸಿದ್ದರೂ ಯಾವುದೇ ಉಪಯೋಗವಾಗಿರಲಿಲ್ಲ. ಅಲ್ಲದೆ ಸೋಮವಾರ ಸಮೀಪದ ಕಲ್ಲಹಳ್ಳಿ ಗ್ರಾಮದಲ್ಲಿ ಮೂರು ಮೇಕೆಗಳನ್ನು ಕೊಂದುಹಾಕಿತ್ತು. ಈ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಕೊಲ್ಲುತ್ತಿದ್ದ ಹುಲಿಪತ್ತೆಗೆ ಅರಣ್ಯ ಇಲಾಖೆಯ ಬಫರ್ ವಲಯದ ಅಧಿಕಾರಿಗಳು ಸೋಮವಾರ ರಾತ್ರಿ ಥರ್ಮಲ್ ಡ್ರೋನ್ ಹಾರಿಸುತ್ತಿದ್ದಾಗ ಹುಲಿ ಸತ್ತಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂಡೀಪುರ ಹುಲಿಯೋಜನೆಯ ಕ್ಷೇತ್ರ ನಿರ್ದೇಶಕ ಎಸ್. ಪ್ರಭಾಕರನ್ ಭೇಟಿ ನೀಡಿ ಪರಿಶೀಲಿಸಿದರು. ಹುಲಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಡಿವೈಎಸ್‌ಪಿ ಸ್ನೇಹಾರಾಜ್, ಬೇಗೂರು ಸರ್ಕಲ್ ಇನ್ ಸ್ಪೆಕ್ಟರ್ ಮೋಹಿತ್ ಸಹದೇವ್, ತೆರಕಣಾಂಬಿ ಪೊಲೀಸ್ ಠಾಣೆಯ ಸಬ್‌ಇನ್ ಸ್ಪೆೆಕ್ಟರ್ ಕೆ.ಎಂ.ಮಹೇಶ್ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದರು.
ಹುಲಿಯ ಕಳೇಬರವನ್ನು ಬಂಡೀಪುರಕ್ಕೆ ಕೊಂಡೊಯ್ದ ಅರಣ್ಯ ಇಲಾಖೆಯ ಪಶುವೈದ್ಯ ಡಾ.ವಾಸಿಂ ಮಿರ್ಜಾ ಮತ್ತು ಡಾ. ಆದರ್ಶ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅಲ್ಲಿಯೇ ಸುಟ್ಟುಹಾಕಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ರೈತ ಸಂಘಟನೆ ಅವರು ಹುಲಿ ಸಾವಿಗೆ ಅರಣ್ಯಾಧಿಕಾರಿಗಳೇ ಜವಾಬ್ದಾರಿ ಹೊರಬೇಕು. ಈ ಭಾಗದಲ್ಲಿ ಹುಲಿ ಚಿರತೆಗಳ ದಾಳಿಗೆ ಪ್ರತಿ ದಿನವೂ ಜಾನುವಾರುಗಳು ಸಾಯುತ್ತಿದ್ದರೂ ಅವುಗಳನ್ನು ಸೆರೆಹಿಡಿಯುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಈ ಭಾಗದ ಜನರು ತಮ್ಮ ಹಾಗೂ ಜಾನುವಾರುಗಳ ಮತ್ತು ಬೆಳೆಗಳ ರಕ್ಷಣೆಗೆ ತಕ್ಕ ಕ್ರಮಕೈಗೊಳ್ಳಬೇಕಾಗಿದೆ. ಸೋಲಾರ್ ಬೇಲಿ ಸ್ಪರ್ಶಿಸಿ ಹುಲಿ ಸಾವಿಗೀಡಾಗಿದೆ. ಆದ್ದರಿಂದ ಅರಣ್ಯ ಇಲಾಖೆಯವರು ಯಾವುದೇ ಕಾರಣಕ್ಕೂ ರೈತರ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net