ಭಯದ ವಾತವರಣ: ಹುಲಿ ದಾಳಿಯಿಂದ ಜಾನುವಾರುಗಳು ಮೃತಪಡುವುದು, ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈಗ ಕುರಿಗಾಹಿ ಮೇಲೆ ನಡೆದಿರುವ ಹುಲಿ ದಾಳಿ ಹಿನ್ನೆಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹುಲಿ ದಾಳಿ ಮಾಡಿದರೂ ಕುರಿಗಾಹಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಮನುಷ್ಯನ ಮೇಲೆರಗಿದ ಹುಲಿ ಮತ್ತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಜಾನುವಾರು ಗಳನ್ನು ಮೇಯಿಸಲು, ಕೃಷಿ ಕಾರ್ಯ, ಪಂಪ್‌ಸೆಟ್‌ಗಳ ನೀರೆತ್ತಲು ಮತ್ತಿತರ ಉದ್ದೇಶಗಳಿಗೆ ಜಮೀನುಗಳಿಗೆ ಹೋಗಲು ಈ ಭಾಗದ ಜನರು ಭಯ ಬೀಳುತ್ತಿದ್ದಾರೆ. ಆದ್ದರಿಂದ ಕೂಡಲೇ ಹುಲಿ ಸೆರೆಗೆ ಕ್ರಮ ವಹಿಸಬೇಕು ಎಂದು ಕುಣಗಹಳ್ಳಿ ಮತ್ತು ಗೋಪಾಲಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.