ಒತ್ತುವರಿ ತೆರವಿಗೆ ಬಂದವರು ವಾಪಸ್

ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ತಾಲೂಕು ಆಡಳಿತ ಕೈಗೊಂಡ ಒತ್ತುವರಿ ತೆರವು ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ಬೆಂಬಲಿಗರು ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರೊಂದಿಗೆ ವಾಗ್ವಾದ ನಡೆಸಿದರು.
ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ತಾಲೂಕು ಆಡಳಿತ ಕೈಗೊಂಡ ಒತ್ತುವರಿ ತೆರವು ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ಬೆಂಬಲಿಗರು ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರೊಂದಿಗೆ ವಾಗ್ವಾದ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಪುರದಲ್ಲಿ ಸರ್ವೇಗೆ ಅವಕಾಶ ನೀಡದ ಬಿಜೆಪಿ ಮುಖಂಡರು
  • ನೋಟಿಸ್ ನೀಡದೆ ಏಕಾಏಕಿ ತೆರವಿಗೆ ಮಾಜಿ ಶಾಸಕ ಆಕ್ರೋಶ
  • ತಹಸೀಲ್ದಾರ್‌ಗೆ ಸಿ.ಎಸ್.ನಿರಂಜನ್ ಕುಮಾರ್ ತರಾಟೆ
ಗುಂಡ್ಲುಪೇಟೆ: ತಾಲೂಕಿನ ಶಿವಪುರದಲ್ಲಿ ಶನಿವಾರ ಒತ್ತುವರಿದಾರರಿಗೆ ಮುಂಚಿತವಾಗಿ ನೋಟಿಸ್ ನೀಡದೆ ಏಕಾಏಕಿ ತೆರವುಗೊಳಿಸಲು ಮುಂದಾದ ತಾಲೂಕು ಆಡಳಿತವನ್ನು ಸ್ಥಳೀಯರು ಹಾಗೂ ಬಿಜೆಪಿ ಮುಖಂಡರು ವಾಪಸ್ ಕಳಿಸಿದರು.
ಗ್ರಾಮದ ಸರ್ಕಾರಿ ಜಮೀನಿನ 3.18 ಗುಂಟೆ ಖರಾಬು ಭೂಮಿಯನ್ನು ಅಕ್ಕಪಕ್ಕದ ಜಮೀನುಗಳ ಕೆಲ ರೈತರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದರು. ಅಲ್ಲದೆ 2022ರಲ್ಲಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿದ್ದರು. ಆದರೂ ಶನಿವಾರ ತಹಸೀಲ್ದಾರ್ ಎಂ.ಎಸ್.ತನ್ಮಯಿ ನೇತೃತ್ವದಲ್ಲಿ ಮೀಸಲು ಪೊಲೀಸ್ ಪಡೆ ಬಂದೋಬಸ್ತ್‌ನಲ್ಲಿ ಒತ್ತುವರಿ ತೆರವಿಗೆ ತಾಲೂಕು ಆಡಳಿತ ಮುಂದಾಯಿತು.
ವಿಷಯ ತಿಳಿದ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹಾಗೂ ಬಿಜೆಪಿ ಬೆಂಬಲಿಗರು ಕೂಡಲೇ ಸ್ಥಳಕ್ಕೆ ತೆರಳಿ ಒತ್ತುವರಿ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿ ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಹಲವಾರು ವರ್ಷಗಳಿಂದ ಭೂಮಿಯಲ್ಲಿ ಬೆಳೆ ಬೆಳೆಯುತ್ತಿರುವ ರೈತರು ಈ ಬಾರಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಮಳೆಬೀಳದೆ ಫಲಸಲು ಉಳಿಸಿಕೊಳ್ಳಲು ಸಾಹಸ ಮಾಡುತ್ತಿದ್ದಾರೆ. ಆದರೆ, ನಿಮಗೆ ಈ ಒತ್ತುವರಿ ತೆರವಿಗೆ ಯಾರು ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರಶ್ನಿಸಿದರು.
ಇದೇ ರೈತರು ಗ್ರಾಮದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಓಣಿ, ಭೂಮಿಯ ಪಟ್ಟಿಕೊಟ್ಟು ಮನವಿ ಸಲ್ಲಿಸಿದ್ದರೂ ನೀವು ಅದನ್ನು ಪರಿಗಣಿಸದೆ ಏಕಾಏಕಿ ಒತ್ತುವರಿ ತೆರವಿಗೆ ಏಕೆ ಬಂದಿದ್ದೀರಿ? ನೋಟಿಸ್ ನೀಡದೆ ತೆರವು ಮಾಡುವುದು ಸರಿಯಲ್ಲ. ರಾಜಕೀಯ ಒತ್ತಡದಿಂದ ಈ ಕೃತ್ಯ ಮಾಡುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲೆಲ್ಲಿ ಒತ್ತುವರಿ ಇದೆಯೋ ಅಲ್ಲೆಲ್ಲ ತೆರವು ಮಾಡಿದ್ದೀರಾ? ಮೊದಲು ಶಿವಪುರದಲ್ಲಿ ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡಿ, ನಂತರ ಇಲ್ಲಿಗೆ ಬನ್ನಿ ಎಂದು ಒತ್ತುವರಿ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಗೆ ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವವರು ಬಿಜೆಪಿಗೆ ಸೇರಿದವರು ಎಂಬ ಕಾರಣಕ್ಕೆ ತಾಲೂಕು ಆಡಳಿತ ರಾಜಕೀಯ ಮಾಡುತ್ತಿದೆ. ಎಲ್ಲ ಒತ್ತುವರಿಗಳನ್ನು ತೆರವು ಮಾಡಿದ ನಂತರ ಇಲ್ಲಿಗೆ ಬನ್ನಿ ಎಂದು ಸ್ವಲ್ಪಹೊತ್ತು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ನಂತರ ತಹಸೀಲ್ದಾರ್ ಮಾತನಾಡಿ, ಈಗಾಗಲೇ ನೋಟಿಸ್ ನೀಡಲಾಗಿದೆ. ಮೂರೂವರೆ ಎಕರೆ ಶೇಂದಿವನ ಒತ್ತುವರಿ ಮಾಡಿಕೊಂಡಿದ್ದು, ಅಳತೆ ಕೂಡ ಮಾಡಿಸಲಾಗಿದೆ. ತೆರವು ಮಾಡುವಂತೆ ಸೂಚಿಸಿದ್ದರೂ ತೆರವುಗೊಳಿಸಿಲ್ಲ. ಗ್ರಾಮಸ್ಥರು ಮನವಿ ನೀಡಿದ್ದ ಮೇರೆಗೆ ಮಹಜರು ನಡೆಸಿ ತೆರವಿಗೆ ಮುಂದಾಗಿದ್ದೇವೆ. ಫಸಲು ಇರುವ ಕಾರಣ ಕಟಾವು ಮುಗಿದ ಮೇಲೆ ಎಲ್ಲ ಸರ್ಕಾರಿ ಭೂಮಿಗಳ ಒತ್ತುವರಿಗಳನ್ನು ತೆರವು ಮಾಡಲಾಗುವುದು ಎಂದರು.
ಒತ್ತುವರಿ ಮಾಡಿದ ರೈತರು ಬಿಜೆಪಿ ಬೆಂಬಲಿತರು ಎಂಬ ಕಾರಣಕ್ಕಾಗಿ ತೆರವು ಮಾಡಲಾಗುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಮಾಜಿ ಶಾಸಕರು ಕಿಡಿಕಾರಿದರು. ನಂತರ ತೆರವು ಕಾರ್ಯಾಚರಣೆ ಕೈಬಿಡಲಾಯಿತು.
ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೊಡಸೋಗೆ ಶಿವಪ್ರಸಾದ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನಾಗೇಂದ್ರ, ವೀರಪ್ಪ, ಮಂಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net