ಖುಷ್ಕಿ ಭೂಮಿ ನಂಬಿದವರಿಗಿಲ್ಲ ಖುಷಿ

ಹನೂರು ತಾಲೂಕಿನ ನಂಜೇಒಡೆಯರ ದೊಡ್ಡಿಯ ಜಮೀನಿನಲ್ಲಿ ಸಜ್ಜೆ ಫಸಲು ಸಂಪೂರ್ಣ ಒಣಗಿರುವುದು.
ಹನೂರು ತಾಲೂಕಿನ ನಂಜೇಒಡೆಯರ ದೊಡ್ಡಿಯ ಜಮೀನಿನಲ್ಲಿ ಸಜ್ಜೆ ಫಸಲು ಸಂಪೂರ್ಣ ಒಣಗಿರುವುದು.
Published on

ಹನೂರು:

ತಾಲೂಕಿನಲ್ಲಿ ಮಳೆ ಸಂಪೂರ್ಣ ಕೈ ಕೊಟ್ಟಿರುವ ಪರಿಣಾಮ ಬಿತ್ತನೆಯಾಗಬೇಕಿದ್ದ ಖುಷ್ಕಿ ಭೂಮಿ ಈಗ ಕಾದ ನೆಲವಾಗಿದೆ. ಶೇ. 1.5 ಬಿತ್ತನೆಯಾಗಿದ್ದ ಪ್ರದೇಶದಲ್ಲಿ ಬೆಳೆ ಒಣಗಿವೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.

ತಾಲೂಕಿನಲ್ಲಿ ಹೆಚ್ಚಿನ ರೈತರು ಖುಷ್ಕಿ ಭೂಮಿಯನ್ನು ಹೊಂದಿದ್ದು, ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದಾರೆ. ಬಹುತೇಕ ರೈತರು ವರ್ಷಕ್ಕೆ ಒಂದು ಬೆಳೆಯನ್ನು ಮಾತ್ರ ಬೆಳೆಯುತ್ತಾರೆ. ತಾಲೂಕಿನ ಹನೂರು ಹಾಗೂ ರಾಮಾಪುರ ಹೋಬಳಿಯಲ್ಲಿ ಮುಖ್ಯವಾಗಿ ರಾಗಿ, ಮುಸುಕಿನ ಜೋಳ, ಕಡಲೆಕಾಯಿ, ಎಳ್ಳು, ಸಜ್ಜೆ ಹಾಗೂ ಹುರುಳಿಯನ್ನು ಬೆಳೆದರೆ, ಲೊಕ್ಕನಹಳ್ಳಿ ಹೋಬಳಿಯಲ್ಲಿ ಮುಸುಕಿನ ಜೋಳದ ಜತೆಗೆ ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್, ಬೀನ್ಸ್, ಆಲೂಗಡ್ಡೆ ಹಾಗೂ ಇನ್ನಿತರ ತರಕಾರಿ ಬೆಳೆ ಬೆಳೆಯುತ್ತಾರೆ. ಆದರೆ, 2 ವರ್ಷದಿಂದಲೂ ಸಮರ್ಪಕ ಮಳೆಯಾಗಿಲ್ಲ. ಇದರಿಂದ ರೈತರು ನಷ್ಟ ಅನುಭವಿಸಿದ್ದಾರೆ.
ಅಂತರ್ಜಲಮಟ್ಟ ಕುಸಿತ
ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮಳೆರಾಯ ಕೈ ಕೊಟ್ಟಿರುವ ಪರಿಣಾಮ ಶೇ.98.5 ಖುಷ್ಕಿ ಭೂಮಿಯಲ್ಲಿ ಬಿತ್ತನೆ ಕಾರ್ಯವೇ ನಡೆದಿಲ್ಲ. ಅಂತರ್ಜಲಮಟ್ಟ ಕುಸಿತದಿಂದ ಪಂಪ್‌ಸೆಟ್‌ಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಕೆರೆಕಟ್ಟೆಗಳು ಹಾಗೂ ಜಲ ಮೂಲಗಳು ಬತ್ತಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ಸಮಸ್ಯೆ ತೀವ್ರವಾಗಿದೆ.
ಶೇ.1.5 ಬಿತ್ತನೆ
ತಾಲೂಕಿನಲ್ಲಿ ಒಟ್ಟು 16,987 ಹೆಕ್ಟೇರ್ ಕೃಷಿ ಭೂಮಿ ಇದೆ. ಹನೂರು ಹೋಬಳಿಯಲ್ಲಿ 6,526 ಹೆಕ್ಟೇರ್ ಪೈಕಿ 4,862 ಹೆಕ್ಟೇರ್ ಮಳೆಯಾಶ್ರಿತ ಖುಷ್ಕಿ ಭೂಮಿಯಾಗಿದೆ. ರಾಮಾಪುರ ಹೋಬಳಿಯಲ್ಲಿ 5,206 ಹೆಕ್ಟೇರ್‌ನಲ್ಲಿ 4,196 ಹೆಕ್ಟೆರ್ ಹಾಗೂ ಲೊಕ್ಕನಹಳ್ಳಿ ಹೋಬಳಿಯಲ್ಲಿ 5,255 ಹೆಕ್ಟೇರ್ ಪೈಕಿ 3,835 ಹೆಕ್ಟೇರ್ ಮಳೆಯಾಶ್ರಿತ ಭೂಮಿಯಾಗಿದೆ. ಮಳೆಯಾಗದ ಪರಿಣಾಮ ಬಹುತೇಕ ಭೂಮಿಯಲ್ಲಿ ಬಿತ್ತನೆಯಾಗಿಲ್ಲ. ಹನೂರು ಹೋಬಳಿಯಲ್ಲಿ ಪ್ರಮುಖವಾಗಿ ಮುಸುಕಿನ ಜೋಳ ಬಿತ್ತನೆ ಪ್ರದೇಶದ ಗುರಿ 3,450 ಹೆಕ್ಟೇರ್‌ನಲ್ಲಿ 18 ಹೆಕ್ಟೇರ್, ಲೊಕ್ಕನಹಳ್ಳಿ ಹೋಬಳಿಯಲ್ಲಿ 3,000 ಹೆಕ್ಟೇರ್‌ಗೆ 94, ರಾಮಾಪುರ ಹೋಬಳಿಯಲ್ಲಿ 3,365 ಹೆಕ್ಟೇರ್‌ಗೆ 25 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಇನ್ನು ರಾಗಿ ಹೋಬಳಿವಾರು ಕ್ರಮವಾಗಿ 1,300, 1,000 ಹಾಗೂ 2,025 ಹೆಕ್ಟೇರ್ ಗುರಿಯಲ್ಲಿ ಬಿತ್ತನೆ ಶೂನ್ಯವಾಗಿದೆ. ಸಜ್ಜೆ ಕ್ರಮವಾಗಿ 60 ಹೆಕ್ಟೇರ್‌ನಲ್ಲಿ 35, 50 ಹೆಕ್ಟೇರ್‌ನಲ್ಲಿ 5 ಹೆಕ್ಟೇರ್ ಬಿತ್ತನೆಯಾಗಿದ್ದರೆ, ರಾಮಾಪುರದಲ್ಲಿ 50 ಹೆಕ್ಟೇರ್‌ನಲ್ಲಿ ಬಿತ್ತನೆಯೇ ಆಗಿಲ್ಲ. ತಾಲೂಕಿನಲ್ಲಿ ಶೇ 1.5 ಬಿತ್ತನೆಯಾಗಿರುವ ಭೂಮಿಯಲ್ಲಿ ಫಸಲು ಸಂಪೂರ್ಣ ಒಣಗಿದೆ. ಶೇ.98.5 ಬಿತ್ತನೆ ಕಾರ್ಯವೇ ನಡೆದಿಲ್ಲ.
ಮಳೆಗಾಗಿ ಕಾಯುತ್ತಿರುವ ರೈತರು
ತಾಲೂಕಿನಲ್ಲಿ ಖುಷ್ಕಿ ಭೂಮಿಯನ್ನು ರೈತರು ಪೂರ್ವ ಮುಂಗಾರಿನಲ್ಲಿ ಎಳ್ಳು, ಹುರುಳಿಯನ್ನು ಬಿತ್ತನೆ ಮಾಡುತ್ತಿದ್ದರು. ಮುಂಗಾರಿನಲ್ಲಿ ರಾಗಿ, ಮುಸುಕಿನ ಜೋಳ, ಅವರೆಯನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತಿದ್ದರು. ಹಾಗಾಗಿ ಕೆಲ ರೈತರು ಮೂರ‌್ನಾಲ್ಕು ತಿಂಗಳ ಹಿಂದೆಯೇ ಬಿತ್ತನೆಗಾಗಿ ಭೂಮಿಯನ್ನು ಉಳುಮೆ ಮಾಡಿಸಿದ್ದಾರೆ. ಕೃಷಿ ಇಲಾಖೆಯಿಂದ ಈಗಾಗಲೇ ಬಿತ್ತನೆ ಬೀಜ ವಿತರಿಸಲಾಗಿದೆ. ಆದರೆ ಮಳೆಯಾಗದ ಪರಿಣಾಮ ಬಿತ್ತನೆ ಕಾರ್ಯ ಸಾಧ್ಯವಾಗಿಲ್ಲ. ಇದರಿಂದ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿ ಮುಸುಕಿನ ಜೋಳ 377 ಕ್ವಿಂಟಾಲ್, ರಾಗಿ 105 ಕ್ವಿಂಟಾಲ್ ಹಾಗೂ 83 ಕ್ವಿಂಟಾಲ್ ನೆಲಗಡಲೆ ಬಿತ್ತನೆ ಬೀಜ ದಾಸ್ತಾನಿದೆ.
ಒಣಗುತ್ತಿವೆ ಫಸಲು
ನೀರಾವರಿ ಜಮೀನುಗಳಲ್ಲಿ ಮುಖ್ಯವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗಿದೆ. ಆದರೆ ಅಂತರ್ಜಲ ಮಟ್ಟ ಕುಸಿತದ ಪರಿಣಾಮ ಬೆಳೆಗಳಿಗೆ ಸಮರ್ಪಕವಾಗಿ ನೀರೋದಗಿಸಲು ಸಾಧ್ಯವಾಗಿಲ್ಲ. ಇದರಿಂದ ಫಸಲು ಒಣಗುತ್ತಿದ್ದು, ರೈತರನ್ನು ನಷ್ಟದ ಚಿಂತನೆಗೆ ನೂಕಿದೆ.
ರೈತರನ್ನು ಕಾಪಾಡುತ್ತಿರುವುದೇ ಹೈನುಗಾರಿಕೆ
ತಾಲೂಕಿನಲ್ಲಿ ಬಹುತೇಕ ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇದು ಜೀವನ ನಿರ್ವಹಣೆಗೆ ಆಧಾರವಾಗಿದೆ. ಆದರೆ, ಮಳೆಯಾಗದ ಪರಿಣಾಮ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೂರಿದೆ. ರೈತರು ಒಂದು ಟ್ರಾೃಕ್ಟರ್ ಮೇವನ್ನು 13 ಸಾವಿರ ರೂ.ಗೆ ಖರೀದಿಸಿ ಸಮಸ್ಯೆಯಾಗದಂತೆ ಮೇವು ಒದಗಿಸುತ್ತಿದ್ದಾರೆ. ಹಾಗಾಗಿ ಕೃಷಿಗೆ ಹಿನ್ನಡೆಯಾಗಿದ್ದರೂ ಹೈನುಗಾರಿಕೆಯನ್ನು ಮಾತ್ರ ರೈತರು ಬಿಟ್ಟಿಲ್ಲ. ಇದಕ್ಕೆ ಜಿಲ್ಲೆಯಲ್ಲಿ ಹಾಲು ಉತ್ಪಾದನೆಯಲ್ಲಿ ತಾಲೂಕು ಪ್ರಥಮ ಸ್ಥಾನದಲ್ಲಿರುವುದೇ ಸಾಕ್ಷಿಯಾಗಿದೆ.
ಬರಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ
ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಹನೂರು ತಾಲೂಕಿನಲ್ಲಿ ಈ ವರ್ಷ ಮಳೆಯ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ತಾಲೂಕು ವ್ಯಾಪ್ತಿಯ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ವರ್ಷದ ಆರಂಭದಿಂದಲೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಬಿತ್ತನೆ ಕಾರ್ಯ ನಡೆದಿಲ್ಲ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಇದರಿಂದ ಬರದ ಛಾಯೆ ಆವರಿಸಿದೆ. ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ರೈತ ಸಂಘಟನೆಗಳು ಒತ್ತಾಯಿಸಿದ್ದು, ಈ ಬಗ್ಗೆ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಎರಡು ಎಕರೆ ಜಮೀನನ್ನು ಹೊಂದಿದ್ದು, ಕಳೆದ ವರ್ಷ ತಕ್ಕಮಟ್ಟಿಗೆ ಫಸಲು ಕೈಗೂಡಿತ್ತು. ಆದರೆ ಈ ವರ್ಷ ಮುಂಗಾರಿನಲ್ಲಿ ಸಜ್ಜೆ (ಕಂಬು) ಬಿತ್ತನೆ ಮಾಡಲಾಗಿತ್ತು. ಆದರೆ ಮಳೆ ಕೈಕೊಟ್ಟ ಕಾರಣ ಫಸಲು ಸಂಪೂರ್ಣ ಒಣಗಿದ್ದು, ತುಂಬ ನಷ್ಟವಾಗಿದೆ. ಹಿಂಗಾರು ಮಳೆಯಿಲ್ಲದೆ ಬಹುತೇಕ ರೈತರು ಬಿತ್ತನೆಯನ್ನೇ ಮಾಡಿಲ್ಲ. ಕೆಲ ರೈತರು ಭೂಮಿಯನ್ನು ಉಳುಮೆ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ. ಆದರೆ ಮಳೆ ಬರುವ ಮುನ್ಸೂಚನೆಯೇ ಇಲ್ಲ.
ಮದಲೈಮುತ್ತು ರೈತ ತೊಮಿಯಾರ್‌ಪಾಳ್ಯ
ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರಿನಲ್ಲಿ ಬಿತ್ತನೆ ಮಾಡಲಾಗಿದ್ದ ಫಸಲು ಮಳೆಯಿಲ್ಲದ ಕಾರಣ ಶೇ.50ರಷ್ಟು ಒಣಗಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಇನ್ನು ಬಹುತೇಕ ಜಮೀನುಗಳಲ್ಲಿ ಬಿತ್ತನೆ ಕಾರ್ಯವೇ ನಡೆದಿಲ್ಲ. ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ನಾಗೇಂದ್ರ ಕೃಷಿ ಅಧಿಕಾರಿ ಹನೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net