ಕೊಳ್ಳೇಗಾಲದಲ್ಲಿ ಸದ್ಯಕ್ಕಿಲ್ಲ ನೀರಿಗೆ ಸಮಸ್ಯೆ

 ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಪಂ ವ್ಯಾಪ್ತಿಯಲ್ಲಿ ಬೇಸಿಗೆ ಹಿನ್ನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೀರು ಸಂಗ್ರಹಿಸಲು ತೊಂಬೆಗಳನ್ನು ಸ್ವಚ್ಛಗೊಳಿಸಿದ ಸಂದರ್ಭ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಪಂ ವ್ಯಾಪ್ತಿಯಲ್ಲಿ ಬೇಸಿಗೆ ಹಿನ್ನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೀರು ಸಂಗ್ರಹಿಸಲು ತೊಂಬೆಗಳನ್ನು ಸ್ವಚ್ಛಗೊಳಿಸಿದ ಸಂದರ್ಭ.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಆಡಳಿತದಿಂದ ಮುನ್ನೆಚ್ಚರಿಕೆ
  • ಸಂಕಷ್ಟಕ್ಕೀಡಾಗುವ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ
ಕೊಳ್ಳೇಗಾಲ: ಬೇಸಿಗೆ ತಾಪ ದಿನೇ ದಿನೆ ಹೆಚ್ಚಳವಾಗುತ್ತಿದ್ದರೆ ಮತೊಂದೆಡೆ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಗುರುತಿಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.
ಕೊಳ್ಳೇಗಾಲ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಈಗಾಗಲೇ 7 ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಅಧ್ಯಕ್ಷತೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ 7 ಟಾಸ್ಕ್‌ಫೋರ್ಸ್ ಸಭೆ ನಡೆಸಿ ಕುಡಿಯುವ ನೀರಿನ ಲಭ್ಯತೆ ಬಗ್ಗೆ ಚರ್ಚಿಸಲಾಗಿದೆ. ಹಾಗೊಂದು ವೇಳೆ ಸಮಸ್ಯೆಯಾದರೆ ಪರ್ಯಾಯ ಸಿದ್ಧತಾ ಕಾರ್ಯ ಕೈಗೊಳ್ಳಲು ಅಗತ್ಯ ಯೋಜನೆ ತಯಾರಿಸಿದ್ದಾರೆ.
ಚಿಕ್ಕಲ್ಲೂರು, ದೊಡ್ಡಿಂದುವಾಡಿ, ಧನಗೆರೆ, ಹರಳೆ, ಕೊಂಗರಹಳ್ಳಿ, ಕುಣಗಳ್ಳಿ, ಕುಂತೂರು, ಮಧುವನಹಳ್ಳಿ, ಮುಳ್ಳೂರು, ಪಾಳ್ಯ, ಸತ್ತೇಗಾಲ, ಸಿದ್ದಯ್ಯನಪುರ, ಸಿಂಗನಲ್ಲೂರು, ಟಗರಪುರ, ತೆಳ್ಳನೂರು, ತಿಮ್ಮರಾಜೀಪುರ ಕೊಳ್ಳೇಗಾಲ ತಾಲೂಕಿನಲ್ಲಿವೆೆ. ಒಟ್ಟು 16 ಪಂಚಾಯಿತಿಗಳಲ್ಲಿ ಹರಳೆ ಗ್ರಾಮ ಪಂಚಾಯಿತಿಯ ಹಳೇಅಣಗಳ್ಳಿ ಗ್ರಾಮ, ಕುಣಗಳ್ಳಿ ಗ್ರಾಮ ಪಂಚಾಯಿತಿಯ ಉತ್ತಂಬಳ್ಳಿ ಗ್ರಾಮ, ಟಗರಪುರ ಗ್ರಾಮ ಪಂಚಾಯಿತಿಯ ಮಲ್ಲಹಳ್ಳಿಮಾಳ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ತೆಳ್ಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಳ್ಳನೂರು, ಬಾಣೂರು, ಬಾಳಗುಣಸೆ, ಅಂಕಣಾಪುರ, ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳೇಗೌಡನ, ಕೊತ್ತನೂರು, ಪ್ರಕಾಶ್ ಪಾಳ್ಯ ಗ್ರಾಮಕ್ಕೆ ಜಲಜೀವನ್ ಮಿಷನ್‌ನಡಿ ನೀರು ಸರಬರಾಜು ಮಾಡುತ್ತಿರುವುದನ್ನು ಗುರುತಿಸಲಾಗಿದೆ. ಒಟ್ಟು 5 ಪಂಚಾಯಿತಿ ವ್ಯಾಪ್ತಿಯ 11 ಗ್ರಾಮಗಳಿಗೆ ನೀರಿನ ಸಮಸ್ಯೆ ಆಗದಂತೆ ಸಿದ್ಧತೆ ಕೈಗೊಳ್ಳಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಸದ್ಯಕ್ಕೆ ಕೊಳ್ಳೇಗಾಲದಲ್ಲಿ ನೀರಿನ ಸಮಸ್ಯೆ ಇಲ್ಲ.
ಬೋರ್‌ವೆಲ್ ವ್ಯವಸ್ಥೆ: ಸದ್ಯಕ್ಕೆ ಕೊಳ್ಳೇಗಾಲ ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳ ಮಾಹಿತಿಯಾಗಿದೆ. ಮುಂದಿನ ದಿನಗಳಲ್ಲಿ 11 ಗ್ರಾಮಗಳಿಗೆ ಸಮಸ್ಯೆ ಆಗಬಹುದೆಂಬ ಚಿಂತನೆಯಲ್ಲಿ ಆ ಗ್ರಾಮಗಳಲ್ಲಿ ಹೊಸದಾಗಿ ಬೋರ್ ಕೊರೆಸುವ ಅಥವಾ ಮತ್ತು ಖಾಸಗಿ ಬೋರ್‌ವೆಲ್‌ನಿಂದ ನೀರಿನ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ.
ನೀರಿನ ಮೂಲ ಎಷ್ಟಿದೆ ?:
16 ಗ್ರಾಪಂ ವ್ಯಾಪ್ತಿಯಲ್ಲಿ 90 ಗ್ರಾಮಗಳಿದ್ದು, 13,4,181 ಜನಸಂಖ್ಯೆ ಇದೆ. 128 ಕೊಳವೆಬಾವಿ ನೀರು ಸರಬರಾಜು(ಒಎಚ್‌ಟಿ) ವ್ಯವಸ್ಥೆ ಇದೆ. ಈ ಪೈಕಿ 122 ಚಾಲ್ತಿಯಲ್ಲಿವೆೆ. 6 ನಿಷ್ಟ್ರಿಯವಾಗಿವೆೆ. 950 ಕಿರುನೀರು ಸರಬರಾಜು(ತೊಂಬೆಗಳು) ವ್ಯವಸ್ಥೆ ಇದ್ದು, 876 ಚಾಲ್ತಿಯಲ್ಲಿವೆೆ. 83 ದುರಸ್ತಿಯಲ್ಲಿವೆೆ. 48 ನಿಷ್ಕ್ರಿಯವಾಗಿವೆೆ. 507 ಕೈ ಪಂಪ್(ಕೊಳವೆ ಬಾವಿ)ಗಳಿದ್ದು, 304 ಚಾಲ್ತಿಯಲ್ಲಿವೆ. 107 ದುರಸ್ತಿಯಲ್ಲಿವೆೆ, 101 ನಿಷ್ಕ್ರಿಯವಾಗಿವೆ. 28 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ 21 ಚಾಲ್ತಿಯಲ್ಲಿವೆೆ. 7 ದುರಸ್ತಿಯಲ್ಲಿವೆ.
"

ಕೊಳ್ಳೇಗಾಲ ತಾಲೂಕಿನಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಗುರುತು ಮಾಡಲಾಗಿದೆ. ಸದ್ಯಕ್ಕೆ ತಾಲೂಕಿನಲ್ಲಿ ನೀರಿನ ತೊಂದರೆ ಇಲ್ಲ. ದೊಡ್ಡ ಸಮಸ್ಯೆ ಕಂಡು ಬರುವುದಿಲ್ಲ. ಒಂದು ವೇಳೆ ಸಣ್ಣ-ಪುಟ್ಟ ಸಮಸ್ಯೆ ಎದುರಾದರೆ ಪರಿಹರಿಸಲು ಸಿದ್ಧವಿದ್ದೇವೆ.

— ಬಸವರಾಜು ತಹಸೀಲ್ದಾರ್, ಕೊಳ್ಳೇಗಾಲ

"

ತಾಲೂಕಿನಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜನ, ಜಾನುವಾರುಗಳಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಇಲ್ಲ. ಟಾಸ್ಕ್‌ಫೋರ್ಸ್ ಸಭೆಗಳಲ್ಲಿ ಮಾಹಿತಿ ಸಂಗ್ರಹಿಸಿ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಸಮಸ್ಯೆ ಆಗದಂತೆ ನಿಗಾ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net