ಸಮಾಜದಲ್ಲಿ ಪೊಲೀಸರ ಸೇವೆ ಅವಿಸ್ಮರಣೀಯ

ಚಾಮರಾಜನಗರದ  ಜಿಲ್ಲಾ ಸಶಸ ಮೀಸಲು ಪಡೆ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
ಚಾಮರಾಜನಗರದ ಜಿಲ್ಲಾ ಸಶಸ ಮೀಸಲು ಪಡೆ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಅಭಿಮತ
  • ಪೊಲೀಸ್ ಧ್ವಜದಿನಾಚರಣೆ ಕಾರ್ಯಕ್ರಮ
  • ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ
ಚಾಮರಾಜನಗರ: ಸಮಾಜದಲ್ಲಿ ಪೊಲೀಸರ ಸೇವೆ ಅತ್ಯಂತ ಮಹತ್ವವಾಗಿದ್ದು, ಅವಿಸ್ಮರಣೀಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತರಾಜ್ ಹೇಳಿದರು.
ನಗರದ ಜಿಲ್ಲಾ ಸಶಸ ಮೀಸಲು ಪಡೆ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾರ್ವಜನಿಕರ ಸುರಕ್ಷತೆಗಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗುವ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಗೌರವ ಸಲ್ಲಿಸಲು 1965ರಿಂದ ಪ್ರತಿವರ್ಷ ಏ.2 ರಂದು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ನಿವೃತ್ತ ಅಧಿಕಾರಿ, ಸಿಬ್ಬಂದಿಗಳ ಮುಂದಿನ ಜೀವನ ಸುಖಕರವಾಗಿರಲೆಂಬ ಸದುದ್ದೇಶ ಪೊಲೀಸ್ ಧ್ವಜ ದಿನದ ಪ್ರಮುಖ ಉದ್ದೇಶವಾಗಿದೆ ಎಂದರು.
ಧ್ವಜ ದಿನದ ಆಚರಣೆಯಲ್ಲಿ 100, 200, 500 ಮುಖಬೆಲೆಯ ಪೊಲೀಸ್ ಧ್ವಜಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ನಿವೃತ್ತರಿಗೆ ವೈದ್ಯಕೀಯ ವೆಚ್ಚ ಸೇರಿದಂತೆ ಇನ್ನಿತರೆ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತದೆ. ಆ ಮೂಲಕ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿವೃತ್ತರಾಗುವ ಅಧಿಕಾರಿಗಳಿಗೆ ಇಲಾಖೆ ವತಿಯಿಂದ ಗೌರವ ಸಮರ್ಪಣೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಮುಖಬೆಲೆಯ ಪೊಲೀಸ್ ಧ್ವಜಗಳನ್ನು ಗಣ್ಯರು ಪ್ರದರ್ಶಿಸಿದರು. ಬಳಿಕ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಆರಕ್ಷಕ ಉಪನಿರೀಕ್ಷಕ ಎಚ್.ಬಿ. ಮಾದೇಗೌಡ ಅವರು ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿಗಳನ್ನು ಹಾರ, ತುರಾಯಿ, ಫಲ ತಾಂಬೂಲ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್‌ಪಿಗಳಾದ ಸ್ನೇಹರಾಜ್, ಧರ್ಮೇಂದ್ರ, ಸೋಮಣ್ಣ, ಇತರೆ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net