ನಾಯಕತ್ವ ಗುಣ ಬಲಪಡಿಸಲು ಸಂಘಟನಾ ಸೃಜನ ಅಭಿಯಾನ ಸಹಕಾರಿ

ಚಾಮರಾಜನಗರದ ಪ್ರೆಸ್ ಕ್ಲಬ್ ನಲ್ಲಿ ಸಂಘಟನಾ ಸೃಜನ ಅಭಿಯಾನದ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು.
ಚಾಮರಾಜನಗರದ ಪ್ರೆಸ್ ಕ್ಲಬ್ ನಲ್ಲಿ ಸಂಘಟನಾ ಸೃಜನ ಅಭಿಯಾನದ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ವೀಕ್ಷಕರಾದ ಶಬರಿನಾಥನ್ ಅಭಿಪ್ರಾಯ
  • ಎಐಸಿಸಿ ವತಿಯಿಂದ ಆಯೋಜಿಸಿರುವ 'ಸಂಘಟನಾ ಸೃಜನ ಅಭಿಯಾನ' ಕುರಿತು ಸುದ್ದಿಗೋಷ್ಠಿ
ಚಾಮರಾಜನಗರ: ಕಾಂಗ್ರೆಸ್ ನಾಯಕತ್ವ ಗುಣ ಬಲಪಡಿಸಲು ಹಾಗೂ ಪ್ರತಿಯೊಬ್ಬರಿಗೂ ಪಕ್ಷದಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಘಟನಾ ಸೃಜನ ಅಭಿಯಾನ ಸಹಕಾರಿಯಾಗಲಿದೆ ಎಂದು ಎಐಸಿಸಿ ವೀಕ್ಷಕರಾದ ಶಬರಿನಾಥನ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾಧ್ಯಕ್ಷ ಆಯ್ಕೆ ಸಂಬಂಧ ಎಐಸಿಸಿ ವತಿಯಿಂದ ಇದೇ ಮೊದಲ ಬಾರಿಗೆ ಸಂಘಟನಾ ಸೃಜನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಿದವರಲ್ಲಿ ಓರ್ವ ಮಹಿಳೆಯನ್ನು ಒಳಗೊಂಡಂತೆ 6 ಅಭ್ಯರ್ಥಿಗಳನ್ನು ಕೆಪಿಸಿಸಿಗೆ ಕಳುಹಿಸಿಕೊಡಲಾಗುತ್ತದೆ. ಬಳಿಕ ಅವರ ಎಐಸಿಸಿಗೆ ಕಳುಹಿಸಕೊಡಲಾಗುತ್ತದೆ. ನಂತರ ರಾಷ್ಟ್ರೀಯ ನಾಯಕರು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹಲವಾರು ಪ್ರಭಾವಿ ಕಾಂಗ್ರೆಸ್ ನಾಯಕರು ಇದ್ದಾರೆ. ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಮಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಅಭ್ಯರ್ಥಿಗಳ ನಾಯಕತ್ವಗುಣ, ಪಕ್ಷಕ್ಕೆ ಅವರು ಸಲ್ಲಿಸಿರುವ ಸೇವೆ, ಸಂಘಟನಾ ಮನೋಭಾವದ ಕುರಿತು ಮಾಹಿತಿ ಕಳೆ ಹಾಕಲಾಗುತ್ತದೆ. ಸ್ಥಳೀಯವಾಗಿ ಪಕ್ಷ ಸಂಘಟನೆಗೆ ಉತ್ತಮ ವ್ಯಕ್ತಿಯನ್ನು ಗುರುತಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಪಕ್ಷ ಸಂಘಟನೆ ಅವಕಾಶ ಸಿಗುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ನಾಯಕತ್ವ ಗುಣ ಬಲಪಡಿಸುವುದು ಹಾಗೂ ಮುಂದಿನ ಚುನಾವಣೆಗೆ ಪಕ್ಷವನ್ನು ಸದೃಢವಾಗಿ ಕಟ್ಟುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ವೀಕ್ಷಕರಾದ ಪುಷ್ಪ ಅಮರನಾಥ್ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳಲ್ಲೂ ಸಂಘಟನಾ ಸೃಜನ ಅಭಿಯಾನವನ್ನು ಆಯೋಜಿಸಲಾಗಿದೆ. ಈ ಮೂಲಕ ಉತ್ತಮವಾದ ನಾಯಕರಿಗೆ ಪಕ್ಷದ ನೇತೃತ್ವವನ್ನು ವಹಿಸಿಕೊಡಲು ಇದು ಸಹಕಾರಿಯಾಗಲಿದೆ. ಹಲವಾರು ಆಕಾಂಕ್ಷಿಗಳು ಅರ್ಜಿಯನ್ನು ತೆಗೆದುಕೊಂಡಿದ್ದಾರೆ. ಪಾರದರ್ಶಕವಾಗಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಮಾಡಲು ಅಭಿಯಾನ ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್ ಪಕ್ಷ ಮಹಿಳೆಯರು, ದಲಿತರು, ಹಿಂದುಳಿದ ವರ್ಗದವರು, ಯುವಕರು, ಅಲ್ಪಸಂಖ್ಯಾತರು ಹಾಗೂ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಲು ಮುಂದಾಗಿದೆ. ಎಐಸಿಸಿ ವೀಕ್ಷಕರು 10-12 ದಿನಗಳ ಕಾಲ ಜಿಲ್ಲೆಯಲ್ಲೇ ಇದ್ದು, ಬ್ಲಾಕ್ ಹಂತಕ್ಕೆ ಭೇಟಿ ಕೊಟ್ಟು ಸೂಕ್ತ ನಾಯಕರ ಆಯ್ಕೆಗೆ ಮುಂದಾಗುತ್ತಾರೆ. ಪ್ರತಿಯೊಬ್ಬರ ಸಲಹೆ ಸೂಚನೆಯನ್ನು ಸ್ವೀಕಾರ ಮಾಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಕೆಪಿಸಿಸಿ ವೀಕ್ಷಕರಾದ ಕಾವೇರಪ್ಪ, ಮಾಜಿ ಶಾಸಕ ಸೋಮಶೇಖರ್, ಪುಷ್ಪ ಅಮರನಾಥ್, ಕಾವೇರಪ್ಪ, ಕೆಪಿಸಿಸಿ ಕಾರ್ಯದರ್ಶಿ ಶಿವನಾಗಪ್ಪ, ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ ಮುನ್ನಾ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net