ಚಾಮರಾಜನಗರದ ಆದಿಶಕ್ತಿ ದೇವಸ್ಥಾನದ ಬಳಿ ಇರುವ ಪುರಾತನ ಪುಟ್ಟಮ್ಮಣ್ಣಿ ಉದ್ಯಾನದಲ್ಲಿ ತಾಲೂಕು ಕನ್ನಡ ಸಾಹಿತ್ಯಪರಿಷತ್ತಿನ ವತಿಯಿಂದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಖಾದ್ರಿ ಶಾಮಣ್ಣ ಅವರ ಕೊಡುಗೆಗಳ ಕುರಿತು ಉಪನ್ಯಾಸ ಹಾಗೂ ಗಾಯನ ಕಾರ್ಯಕ್ರಮ ನಡೆಯಿತು. ಜಗದೀಶನ್, ರವಿಚಂದ್ರಪ್ರಸಾದ್ ಕಹಳೆ, ಶಿವಲಿಂಗಮೂರ್ತಿ, ಪದ್ಮ ಪುರುಷೋತ್ತಮ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಸಾಪದಿಂದ ಉಪನ್ಯಾಸ ಕಾರ್ಯಕ್ರಮ
ಉಪನ್ಯಾಸ ಹಾಗೂ ಗಾಯನ ಕಾರ್ಯಕ್ರಮ
ಚಾಮರಾಜನಗರ: ಕನ್ನಡ ಸಾಹಿತ್ಯ ಪರಂಪರೆಗೆ ಬಹುದೊಡ್ಡ ಶಕ್ತಿ ನೀಡಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಮಾಸ್ತಿ ಎಂದರೆ ಕನ್ನಡದ ಆಸ್ತಿ. ಮಾಸ್ತಿ ಎಂದರೆ ಕನ್ನಡದ ಸಂಪತ್ತು. ಮಾಸ್ತಿ ಎಂದರೆ ಸಾಹಿತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಆದಿಶಕ್ತಿ ದೇವಸ್ಥಾನದ ಬಳಿ ಇರುವ ಪುರಾತನ ಪುಟ್ಟಮ್ಮಣ್ಣಿ ಉದ್ಯಾನದಲ್ಲಿ ತಾಲೂಕು ಕನ್ನಡ ಸಾಹಿತ್ಯಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಖಾದ್ರಿ ಶಾಮಣ್ಣ ಅವರ ಕೊಡುಗೆಗಳ ಕುರಿತು ಉಪನ್ಯಾಸ ಹಾಗೂ ಗಾಯನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಅವರು ಮಾತನಾಡಿದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ 123ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ಕನ್ನಡದ ಪ್ರಸಿದ್ಧ ಸಾಹಿತಿಗಳಿಗೆ, ಲೇಖಕರಿಗೆ, ಕವಿಗಳಿಗೆ ಆದರ್ಶಪ್ರಾಯರಾದವರು. ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಾಹಿತ್ಯವನ್ನು ಅಪ್ಪಿಕೊಂಡ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರಳ ವ್ಯಕ್ತಿತ್ವದವರು. ಆಡಳಿತದಲ್ಲಿ ಅತ್ಯಂತ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದ ಮಾಸ್ತಿ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಸೇವಾಸಕ್ತ ಬಿರುದನ್ನು ನೀಡಿ ಗೌರವಿಸಿರುವುದೇ ಸಾಕ್ಷಿ ಎಂದರು.
ಮಾಸ್ತಿಯವರನ್ನು ಸಣ್ಣ ಕಥೆಗಳ ಜನಕ ಎಂದು ಕರೆಯಲಾಗುತ್ತದೆ. ಸಣ್ಣ ಕಥೆಗಳನ್ನು ಹೇಳುವ ಮಾಸ್ತಿಯವರ ಶೈಲಿ ಅತ್ಯದ್ಭುತ. ಜತೆಗೆ ಕಾದಂಬರಿ, ನಾಟಕ ವಿಮರ್ಶೆ ಪ್ರಬಂಧ ಧಾರ್ಮಿಕ ಕೃತಿಗಳು ಅನುವಾದ ಸಂಪಾದ ಸಂಪಾದಕೀಯ ಲೇಖನಗಳು ಕವಿತೆಗಳ ಸಂಗ್ರಹವನ್ನು ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು 1929ರಲ್ಲಿ ಬೆಳಗಾವಿಯಲ್ಲಿ ನಡೆದ 15ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವ್ಯಕ್ತಿ ಎಂದು ತಿಳಿಸಿದರು.
ಖಾದ್ರಿ ಶಾಮಣ್ಣನವರು ಪತ್ರಿಕೋದ್ಯಮದಲ್ಲಿ ವಿಶೇಷ ಪ್ರತಿಭಾನ್ವಿತರು ಸ್ವಾತಂತ್ರ್ಯ ಸಮಾನತೆ ಗಾಂಧೀಜಿ ಚಿಂತನೆ ಸರ್ವೋದಯ ತತ್ವ ಅಳವಡಿಸಿಕೊಂಡ ಶಾಮಣ್ಣನವರು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಹೋರಾಟ ರೂಪಿಸಿದ ವ್ಯಕ್ತಿ ಪತ್ರಿಕೋದ್ಯಮದಲ್ಲಿ ಹಲವಾರು ಪತ್ರಿಕೆಗಳ ಲೇಖಕರಾಗಿ ಸಂಪಾದಕರಾಗಿ ಸೇವೆ ಸಲ್ಲಿಸಿ ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನು ತಂದುಕೊಟ್ಟವರು. ಇವರ ಸಂಪಾದಕೀಯ ಲೇಖನಗಳು ನೇರ,ಹಾಗೂ ಪಾಂಡಿತ್ಯಪೂರ್ಣ ಭಾಷಾಶೈಲಿಯಲ್ಲಿತ್ತು ಎಂದರು.
ತಮಿಳು ಸಂಘದ ಅಧ್ಯಕ್ಷ ಜಗದೀಶನ್ ಮಾತನಾಡಿ, ಕನ್ನಡ ಕಥೆ, ಕವನ, ಕಾದಂಬರಿ ರಚನೆ ಮಾಡಿದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚಿಕ್ಕವೀರರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಜ್ಞಾನಪೀಠ ಪ್ರಶಸ್ತಿಯನ್ನು ಧರಿಸಿಕೊಟ್ಟ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡದ ಬಹುಮುಖ ಸಾಹಿತಿ ಎಂದು ತಿಳಿಸಿದರು.
ಜನಪದ ಗಾಯಕ ರವಿಚಂದ್ರಪ್ರಸಾದ್ ಕಹಳೆ ಹಾಗೂ ಶಿವಲಿಂಗಮೂರ್ತಿ ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮ ಪುರುಷೋತ್ತಮ್, ಬಿ.ಕೆ ಆರಾಧ್ಯ, ಮಂಜುಳಾ, ನಾಗವೇಣಿ, ಪುಷ್ಪಲತಾ, ರಾಜೇಶ್, ಮಹೇಶ್, ಪ್ರಸಾದ್ ಉಪಸ್ಥಿತರಿದ್ದರು.