ವರ್ಷಕ್ಕೆ ಒಮ್ಮೆ ನಡೆಯುವ ಹಬ್ಬದ ಪ್ರಯುಕ್ತ ಕಾಡೊಲ ಗ್ರಾಮಸ್ಥರು ವಿಭಿನ್ನವಾದ ಆಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಶುಕ್ರವಾರ ತಂಬಿಟ್ಟಿನ ಆರತಿ ಮಾಡಿದ ಬಳಿಕ, ಶನಿವಾರ ಕಾಡುಜನರ ವೇಷಧರಿಸುತ್ತಾರೆ. ಮೈಮೇಲೆ ಸೊಪ್ಪು ಕಟ್ಟಿಕೊಂಡು, ಮುಖಕ್ಕೆ ಮಸಿ ಬಳಿದುಕೊಂಡು ಕಾನನದ ವಾಸಿಗಳ ರೂಪ ತಾಳುತ್ತಾರೆ. ಮನೆಗಳಲ್ಲಿರುವ ಒನಕೆಯನ್ನು ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸುತ್ತಾರೆ. ದೆವ್ವ, ಪೀಡೆಗಳ ಕಾಟದಿಂದ ಮುಕ್ತಿ ದೊರೆಯುವ ನಂಬಿಕೆಯೊಂದಿಗೆ ಕೆಲವು ಆಚರಣೆಗಳು ರೂಢಿಯಲ್ಲಿದ್ದು, ಕಾಡೊಲ ಗ್ರಾಮ ದೇವಿಗೆ ಪೂಜೆ ಸಲ್ಲಿಕೆಯಾಗುತ್ತದೆ.