ರೈತರ ಹಿತವನ್ನೂ ಒಳಗೊಂಡಿದೆ ಸಂವಿಧಾನ

 ಚಾಮರಾಜನಗರ ತಾಲೂಕಿನ ಚಂದಕವಾಡಿ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಂದಕವಾಡಿ ಹೋಬಳಿ ಮಟ್ಟದ ಪರಿಶಿಷ್ಟ ಜಾತಿ ರೈತ ಸಂಘದ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಯಿತು. ದಡದಹಳ್ಳಿ ಗೋವಿಂದರಾಜು, ಸಿದ್ದಯ್ಯನಪುರ ಸೋಮಣ್ಣ, ಮಹದೇವಸ್ವಾಮಿ, ದಡದಹಳ್ಳಿ ಮೂರ್ತಿ ಇತರರು ಹಾಜರಿದ್ದರು.
ಚಾಮರಾಜನಗರ ತಾಲೂಕಿನ ಚಂದಕವಾಡಿ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಂದಕವಾಡಿ ಹೋಬಳಿ ಮಟ್ಟದ ಪರಿಶಿಷ್ಟ ಜಾತಿ ರೈತ ಸಂಘದ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಯಿತು. ದಡದಹಳ್ಳಿ ಗೋವಿಂದರಾಜು, ಸಿದ್ದಯ್ಯನಪುರ ಸೋಮಣ್ಣ, ಮಹದೇವಸ್ವಾಮಿ, ದಡದಹಳ್ಳಿ ಮೂರ್ತಿ ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಡದಹಳ್ಳಿ ಗೋವಿಂದರಾಜು ಅಭಿಮತ
  • ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ವರ್ಷದ ಜಯಂತಿ ಕಾರ್ಯಕ್ರಮ
ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಸರ್ವರ ಒಳಿತಿನೊಂದಿಗೆ ರೈತರ ಹಿತವನ್ನೂ ಹೊಂದಿದೆ ಎಂದು ಚಂದಕವಾಡಿ ಹೋಬಳಿ ಪರಿಶಿಷ್ಟ ಜಾತಿ ರೈತ ಸಂಘದ ಅಧ್ಯಕ್ಷ ದಡದಹಳ್ಳಿ ಗೋವಿಂದರಾಜು ತಿಳಿಸಿದರು.
ತಾಲೂಕಿನ ಚಂದಕವಾಡಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಂದಕವಾಡಿ ಹೋಬಳಿ ಮಟ್ಟದ ಪರಿಶಿಷ್ಟ ಜಾತಿ ರೈತ ಸಂಘದಿಂದ ಪ್ರಥಮ ವರ್ಷದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಂಬೇಡ್ಕರ್ ಅವರು 30ಕ್ಕೂ ಹೆಚ್ಚು ಪದವಿಯನ್ನು ಪಡೆದುಕೊಳ್ಳುವ ಜತೆಗೆ ಭಾರತದ ಅಭಿವೃದ್ಧಿಗೆ ಪೂರಕವಾದ ಸಂವಿಧಾನವನ್ನು ನೀಡಿದ್ದರು. ದೀನ ದಲಿತರು ಹಾಗೂ ಶೋಷಿತರಿಗಷ್ಟೇ ಸಂವಿಧಾನದಲ್ಲಿ ಅವಕಾಶ ನೀಡಲಿಲ್ಲ. ರೈತ ಕುಲವನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಯನ್ನು ಮಾಡುವ ಅಹಾರ ಭದ್ರತೆ ಕಾಯ್ದೆ ಸೇರಿದಂತೆ ಊಳುವವರಿಗೆ ಭೂಮಿ ಒಡೆಯ, ಸಮ ಸಮಾಜ ನಿರ್ಮಾಣಕ್ಕಾಗಿ ಇಲ್ಲದವರಿಗೆ ಜಮೀನು ಹಂಚಿಕೆ, ಗುಂಪು ಕೃಷಿ ಸೇರಿದಂತೆ ವಿವಿಧ ಅಂಶಗಳನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವ ಮೂಲಕ ರೈತರು ಸಮೃದ್ಧಿಯಾಗಿ ನೆಮ್ಮದಿಯ ಜೀವನ ಸಾಗಿಸುವ ಅವಕಾಶವನ್ನು ನೀಡಿದ್ದರು. ಇದರಡಿಯಲ್ಲಿ ನಮ್ಮನ್ನಳಿದ ಸರ್ಕಾರಗಳು ಸವಲತ್ತುಗಳನ್ನು ನೀಡಲು ಸಾಧ್ಯವಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಗುಂಡಣ್ಣ ಮಾತನಾಡಿ, ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟದ ಹಾದಿಯಲ್ಲಿ ನಾವು ಮುನ್ನಡೆಯಬೇಕಾಗಿದೆ. ರೈತಸಂಘವು ನಮ್ಮ ಸಮುದಾಯದ ಯಾವುದೇ ರೈತರಿಗೆ ತೊಂದರೆಯಾದರೂ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುತ್ತದೆ ಎಂದು ಹೇಳಿದರು.
ನಮ್ಮ ಸಮುದಾಯದ ಬಹಳಷ್ಟು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ನಾವು ಇನ್ನೂ ಸಹ ಭೂ ಹಿಡುವಳಿದಾರರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯು ಹದ್ದುಬಸ್ತ್ ಮಾಡಿ ನಮ್ಮನ್ನು ಭೂ ಹಿಡುವಳಿದಾರರೆಂದು ಪರಿಗಣಿಸಬೇಕು. ಅವರ ಹೆಸರಿಗೆ ಆರ್‌ಟಿಸಿಗಳು ಬರುವಂತೆ ಮಾಡಬೇಕು. ಇದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ಸಂಘದ ಗೌರವ ಅಧ್ಯಕ್ಷ ಸಿದ್ದಯ್ಯನಪುರ ಸೋಮಣ್ಣ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡುವ ಜತೆಗೆ ಅವರ ತತ್ವ, ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ. ಸದಾ ಅವರನ್ನು ಸ್ಮರಣೆ ಮಾಡುತ್ತಾ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನಿರಂತರ ಹೋರಾಟ ಮಾಡೋಣ. ಪರಿಶಿಷ್ಟ ಜಾತಿ, ರೈತಸಂಘ ಇದಕ್ಕೆಲ್ಲ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.
ಸಂಘದ ಉಪಾಧ್ಯಕ್ಷ ಚಂದಕವಾಡಿ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಡದಡಹಳ್ಳಿ ಮೂರ್ತಿ, ನಿರ್ದೇಶಕರಾದ ಲಿಂಗರಾಜು, ಅಲೂರು ಮಲ್ಲಣ್ಣ, ಕುಂಬೇಶ್ವರ ಸ್ವಾಮಿ, ಅರಳಿಪುರ ಚಂದ್ರಶೇಖರ್, ನಾಗೇಂದ್ರ, ರಂಗಸ್ವಾಮಿ, ಮಧು ಸೇರಿದಂತೆ 28 ಗ್ರಾಮಗಳ ರೈತಸಂಘದ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net