ವಡಕೆಹಳ್ಳದಲ್ಲಿ ಧರಣಿ ನಿರತರು ಪೊಂಗಲ್ ತಯಾರಿಸಿ ಸಂಕ್ರಾಂತಿ ಹಬ್ಬ ಆಚರಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಲೂರ್ದುಸ್ವಾಮಿ, ಡೇವಿಡ್, ಸಗಾಯಮೇರಿ, ಸೋಫಿಯಾ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಏತ ನೀರಾವರಿ ಯೋಜನೆಗೆ ಆಗ್ರಹ
ಪೊಂಗಲ್ ತಯಾರಿಸಿ ಆಕ್ರೋಶ
ಹನೂರು: ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಿ ತಾಲೂಕಿನ ವಡಕೆಹಳ್ಳದಲ್ಲಿ ಕಳೆದ 81 ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಗುರುವಾರ ಪೊಂಗಲ್ ತಯಾರಿಸಿ ಸಂಕ್ರಾಂತಿ ಹಬ್ಬ ಆಚರಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿಯಿಂದ ರೈತರು ಧರಣಿ ನಡೆಸುತ್ತಿದ್ದು, ಆರಂಭದಲ್ಲಿ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ, ಅಗತ್ಯ ಭರವಸೆ ನೀಡಿದ್ದರು. ತಹಸೀಲ್ದಾರ್ ಕೆ.ಎನ್.ಚೈತ್ರಾ ಅವರು ಸಹ ಭೇಟಿ ನೀಡಿದ್ದರು. ಜತೆಗೆ ಅಂದಿನ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ಜ.15ರೊಳಗೆ ಏತ ನೀರಾವರಿ ಯೋಜನೆ ಸಂಬಂಧ ಡಿಪಿಆರ್ ಸಿದ್ಧವಾಗುವುದಾಗಿ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಕ್ರಮವಾಗದಿರುವುದನ್ನು ಖಂಡಿಸಿ ಧರಣಿ ನಿರತ ರೈತರು ಕಳೆದ 2 ದಿನದ ಹಿಂದೆ ಪ್ರತಿಭಟನೆ ನಡೆಸಿದ್ದರು. ಗುರುವಾರ ಧರಣಿ ಸ್ಥಳದ ಮುಂಭಾಗ ಪೊಂಗಲ್ ತಯಾರಿಸಿ ಸಂಕ್ರಾಂತಿ ಆಚರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತರು ಮಾತನಾಡಿ, ಸಂಕ್ರಾಂತಿ ಹಬ್ಬವನ್ನು ಈವರೆಗೂ ಮನೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸರ್ಕಾರ ಏತ ನೀರಾವರಿ ಬೇಡಿಕೆಯನ್ನು ಈಡೇರಿಸದ ಪರಿಣಾಮ ಧರಣಿ ಸ್ಥಳದಲ್ಲೇ ಆಚರಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿರುದ್ಧ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರದಿದ್ದಲ್ಲಿ ಜ.31ರಿಂದ ರಸ್ತೆತಡೆ ಚಳವಳಿ ನಡೆಸುವುದಾಗಿ ಧರಣಿ ನಿರತರು ತೀರ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಲೂರ್ದುಸ್ವಾಮಿ, ಡೇವಿಡ್, ಪೀಟರ್, ಪೌಲ್ ಧರ್ಮರಾಜ್, ಜಪಮಾಲೆ, ಸಂದನಮೇರಿ, ಸೋಫಿಯಾ, ಸಗಾಯಮೇರಿ, ರವಿನಾ, ಜನಿಫರ್ ಹಾಗೂ ಇತರರು ಇದ್ದರು.