ಕೊಳ್ಳೇಗಾಲ: ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂಕ ಗಳಿಸುವುದನ್ನು ಕಲಿಸುವುದರ ಜತೆಗೆ ಸವಾಲುಗಳನ್ನು ಹೆದರಿಸುವುದನ್ನೂ ಕಲಿಸಬೇಕು ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಸಲಹೆ ನೀಡಿದರು.
ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಶಿಕ್ಷಕರಿಗೆ ಆಯೋಜಿಸಿದ್ದ ಬೋಧನಾ ಸುಧಾರಣಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಜಾಸತ್ತಾತ್ಮಕ ಶ್ರೀಮಂತ ಪ್ರಭುತ್ವದಲ್ಲಿ ಶಿಕ್ಷಕರಿಗಿಂತ ಬೇರದ್ದು ದೊಡ್ಡದಲ್ಲ. ಶಿಕ್ಷಕ ವೃತ್ತಿ ಏಣಿ ಇದ್ದ ಹಾಗೆ. ಮಕ್ಕಳನ್ನು ಸಾಧನೆಯ ಶಿಖರಕ್ಕೆ ಏರಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.]
ಯಾವುದು ನಮ್ಮನ್ನು ಬಂಧನದಿಂದ ಮುಕ್ತಿಗೊಳಿಸುತ್ತದೆಯೋ ಅದೇ ಶಿಕ್ಷಣ. ಶಿಕ್ಷಣವೆಂಬುದು ಮಾನವೀಯತೆಯನ್ನು ಕಲಿಸಿಕೊಡಬೇಕು. ಮಾನಸ ಶಿಕ್ಷಣ ಸಂಸ್ಥೆ ಒಂದು ಪವಿತ್ರ ದೇಗುಲ ಎಂದರು.
ಉಪನ್ಯಾಸಕ ಎಚ್.ಎಲ್.ಸತೀಶ್ ಮಾತನಾಡಿ, ಕೆಲಸ ಎಂಬುದು ಶಾಪವಲ್ಲ. ಕೆಲಸದಲ್ಲಿ ಒಂದು ಆನಂದವಿದೆ ಎಂದು ಗುರುತಿಸಿಕೊಂಡಾಗ ಉಪಯುಕ್ತ ಸಲಕರಣೆಯನ್ನು ಬಳಸಿಕೊಳ್ಳಬಹುದಾಗಿದೆ. ಶಿಕ್ಷಕರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು. ಅವರ ಹಿತಾಶಕ್ತಿಯನ್ನು ಕಾಯುವುದು ಪ್ರತಿ ಶಿಕ್ಷಕರ ಕರ್ತವ್ಯ ಎಂದರು.
ಸಾಹಿತಿ ಶಂಕನಪುರ ಮಹದೇವ, ವಿಶೇಷಾಧಿಕಾರಿ ಎ.ಪಿ.ದಿನೇಶ್‌ಕುಮಾರ್, ಪ್ರಾಂಶುಪಾಲ ಡಾ. ಈ.ಜಗದೀಶ್, ನೈನ ಕ್ಲಾರಿಬೆಲ್, ಮುಖ್ಯ ಶಿಕ್ಷಕ ಆರ್.ಶಂಕರ್, ಸಹ ಮುಖ್ಯ ಶಿಕ್ಷಕಿ ಗಿರಿಜಾಲಕ್ಷ್ಮೀ ಇತರರಿದ್ದರು.