ಹನೂರಿನಲ್ಲಿ ಆಯೋಜಿಸಿದ್ಧ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಕೆ.ಎನ್ ಚೈತ್ರಾ, ಉಮೇಶ್, ಸುಧನ್ವನಾಗ್ ಇತರರಿದ್ದರು.
ಹನೂರು:ತಾಲೂಕಿನ ಗ್ರಾಮಗಳಲ್ಲಿ 3 ತಿಂಗಳವರೆಗೆ ತಲೆದೋರುವ ಕುಡಿಯುವ ನೀರಿನ ಸಮಸ್ಯೆಗೆ ಪ್ರತಿಯೊಬ್ಬರೂ ಅಗತ್ಯ ಕ್ರಮವಹಿಸಿ ನಿಭಾಯಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಶುಕ್ರವಾರ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಆಯೋಜಿಸಿದ್ದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಹನೂರು ಭಾಗದಲ್ಲಿ ಈ ಬಾರಿ ಸಮರ್ಪಕ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು, ಕೆಲವು ಗ್ರಾಮಗಳಲ್ಲಿ ಸಾವಿರ ಅಡಿ ಬೋರ್ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಾಗಾಗಿ ಬೇಸಿಗೆಯಲ್ಲಿ ನೀರಿನ ಅಭಾವವನ್ನು ನೀಗಿಸುವುದೇ ಎಲ್ಲರಿಗೂ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಮಾರ್ಟಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಮುಂದಿನ 3 ತಿಂಗಳವರೆಗೆ ಗ್ರಾಮಗಳಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗೆ ಪ್ರತಿಯೊಬ್ಬರೂ ಅಗತ್ಯ ಮುತುವರ್ಜಿ ವಹಿಸಬೇಕಿರುವುದು ಪ್ರಸ್ತುತ ದಿನಗಳಲ್ಲಿ ಅಗತ್ಯವೂ, ಅನಿವಾರ್ಯವೂ ಆಗಿದೆ. ನೀರಿನ ಸಮಸ್ಯೆ ಉದ್ಭವಿಸಿರುವ ಗ್ರಾಮಗಳಲ್ಲಿ ಖಾಸಗಿ ಜಮೀನಿನ ಪಂಪ್‌ಸೆಟ್‌ನಿಂದ ನೀರು ಪೂರೈಸಲು ಅಗತ್ಯ ಕ್ರಮವಹಿಸುವಂತೆ ತಾಪಂ ಇಒ ಉಮೇಶ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಧನ್ವನಾಗ್, ಪಿಡಿಒಗಳಾದ ಮಾದೇಶ್, ಸುರೇಶ್, ನಂಜುಂಡಸ್ವಾಮಿ, ರಾಮು ಹಾಗೂ ಇನ್ನಿತರರು ಇದ್ದರು.