ಗ್ರಾಮಗಳಲ್ಲಿ ವಿದ್ಯುತ್ ಕಡಿತವಾಗದಂತೆ ಮುನ್ನೆಚ್ಚರಿಕೆ ವಹಿಸಿ
ಹನೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಯ್ಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಉಮೇಶ್, ರಾಚಪ್ಪಾಜಿ, ಮಹೇವಮ್ಮ, ಸೋಮಶೇಖರ್ ಇತರರಿದ್ದರು.
ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಾಳ್ಯ ರಾಚಯ್ಯ ಸೂಚನೆ
ಹನೂರು:ಮುಂಗಾರು ಮಳೆ ಆರಂಭವಾಗಿರುವುದರಿಂದ ಗ್ರಾಮಗಳಲ್ಲಿ ವಿದ್ಯುತ್ ಕಡಿತವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಾಳ್ಯ ರಾಚಯ್ಯ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ತಾಲೂಕಿನಲ್ಲಿ ಮಳೆ ಬಂತೆಂದರೆ ಗ್ರಾಮಗಳಲ್ಲಿ ವಿದ್ಯುತ್ ಕಡಿತವಾಗುತ್ತದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರಿಂದ ದೂರು ಕೇಳಿಬಂದಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ದುರಸ್ತಿಯಲ್ಲಿರುವ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಸರಿಪಡಿಸಬೇಕು. ಹೆಚ್ಚುವರಿ ಟಿಸಿಯನ್ನು ದಾಸ್ತಾನಿರಿಸಿಕೊಳ್ಳಬೇಕು. ಈ ಮೂಲಕ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಸುಸ್ಥಿತಿಯಲ್ಲಿರದ ಬಸ್‌ಗಳು ಸಂಚರಿಸುತ್ತಿವೆ. ಕೆಲ ಮಾರ್ಗದಲ್ಲಿ ವಿದ್ಯಾರ್ಥಿಗಳು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಸಂಚರಿಸುತ್ತಿರುವ ಬಸ್‌ಗಳು ಸಾಲುತ್ತಿಲ್ಲ. ಆದ್ದರಿಂದ ಈ ಬಗ್ಗೆ ಸರ್ವೇ ನಡೆಸಿ ಇದೀಗ ಆಗಮಿಸಿರುವ 6 ಹೊಸ ಬಸ್‌ಗಳನ್ನು ಸಮಸ್ಯೆ ಇರುವ ಮಾರ್ಗಕ್ಕೆ ಬಿಡಲು ಕ್ರಮವಹಿಸಬೇಕು. ಗೃಹಲಕ್ಷ್ಮಿ ಯೋಜನೆಯಡಿ ಕೆಲ ಅಂಚೆ ನೌಕರರು ಫಲಾನುಭವಿಗಳಿಂದ ಪಡೆಯುತ್ತಿರುವ ಕಮಿಷನ್‌ಗೆ ಕಡಿವಾಣ ಹಾಕಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸಮರ್ಪಕವಾಗಿ ಆಗಬೇಕು. ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಒ ಉಮೇಶ್, ವ್ಯವಸ್ಥಾಪಕ ರಮೇಶ್, ಡಿಪೋ ವ್ಯವಸ್ಥಾಪಕ ಭೋಗನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪ್ರೇಮಲತಾ, ಉದ್ಯೋಗ ವಿನಿಮಯ ಕಚೇರಿಯ ಮೋಹಿನ್, ಸಮಿತಿ ಸದಸ್ಯರಾದ ಮಹದೇವಮ್ಮ, ಸಿದ್ದಪ್ಪಾಜಿ, ಸೋಮಶೇಖರ್, ಬಷೀರ್ ಅಹಮದ್, ಗೋವಿಂದ, ನಾಗೇಶ್ ಹಾಗೂ ಇನ್ನಿತರರಿದ್ದರು.