ಜಿಟಿಟಿಸಿ ಸದುಪಯೋಗ ಪಡೆಯಿರಿ

ಗುಂಡ್ಲುಪೇಟೆಯಲ್ಲಿ ನಲ್-ಜಲ್ ಮಿತ್ರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಎಚ್.ಎಂ.ಗಣೇಶ್‌ಪ್ರಸಾದ್ ತರಬೇತಿ ಪ್ರಮಾಣ ಪತ್ರ ವಿತರಿಸಿದರು. ಎಸ್. ವಿನಯ್, ಸಹನಪೂರ್ಣಿಮ, ಮಲ್ಲೇಶ್, ಬಿ.ಕೆ.ನಂದೇಶ್, ಕೆ.ಸುಭಾಷ್‌ಚಂದ್ರು ಇದ್ದರು.
ಗುಂಡ್ಲುಪೇಟೆಯಲ್ಲಿ ನಲ್-ಜಲ್ ಮಿತ್ರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಎಚ್.ಎಂ.ಗಣೇಶ್‌ಪ್ರಸಾದ್ ತರಬೇತಿ ಪ್ರಮಾಣ ಪತ್ರ ವಿತರಿಸಿದರು. ಎಸ್. ವಿನಯ್, ಸಹನಪೂರ್ಣಿಮ, ಮಲ್ಲೇಶ್, ಬಿ.ಕೆ.ನಂದೇಶ್, ಕೆ.ಸುಭಾಷ್‌ಚಂದ್ರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವಜನತೆಗೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಸಲಹೆ
ಗುಂಡ್ಲುಪೇಟೆ: ಪಟ್ಟಣದಲ್ಲಿರುವ ಜಿಟಿಟಿಸಿಯಂತಹ ಉತ್ತಮ ಸಂಸ್ಥೆಯನ್ನು ತಾಲೂಕಿನ ಯುವಜನತೆ ಸದುಪಯೋಗ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಹೊಸೂರು ಬಡಾವಣೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ನಲ್-ಜಲ್ ಮಿತ್ರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹಾಗೂ 2026-27ನೇ ಸಾಲಿನ ಜಿಟಿಟಿಸಿ ತರಬೇತಿ ಕೋರ್ಸ್‌ಗಳ ಪ್ರವೇಶಾತಿ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಸಕನಾದ ಮೂರು ವರ್ಷದಲ್ಲಿ ಉದ್ಯೋಗಕ್ಕಾಗಿ ಜೆಎಸ್‌ಎಸ್ ಸಂಸ್ಥೆ ಸೇರಿ ಹಲವು ಸಂಸ್ಥೆಗಳಿಗೆ ನೂರಾರು ಶಿಫಾರಸು ಪತ್ರ ಕೊಟ್ಟಿದ್ದೇನೆ. ಆದ್ದರಿಂದ ವಿಶೇಷವಾಗಿ ಉದ್ಯೋಗಾವಕಾಶ ನೀಡುವ ಜಿಟಿಟಿಸಿ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ 35 ಜಿಟಿಟಿಸಿ ಸೆಂಟರ್‌ಗಳಿದ್ದು, ನನ್ನ ತಂದೆ ಎಚ್.ಎಸ್.ಮಹದೇವಪ್ರಸಾದ್ ಅವರು ಪಿಜಿಆರ್ ಸಿಂಧ್ಯಾರಿಗೆ ಒತ್ತಡ ತಂದು 2007 ರಲ್ಲೇ ಜಿಟಿಟಿಸಿಯನ್ನು ಗುಂಡ್ಲುಪೇಟೆಯಲ್ಲಿ ಮಾಡಿಸಿದ್ದರು. ಇದರಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಹಲವಾರು ಜನರು ಸ್ವಯಂ ಉದ್ಯೋಗ, ಉದ್ಯಮ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಸಾಗಣೆ ವೆಚ್ಚ ಹೆಚ್ಚಾಗುವ ಕಾರಣ ಇತರ ಉದ್ಯಮಗಳ ಸ್ಥಾಪನೆಗೂ ಕೈಗಾರಿಕೋದ್ಯಮಿಗಳು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಲ್-ಜಲ್ ತರಬೇತಿಯಿಂದ ಆರಂಭಿಕ ಹಂತದ ಸಮಸ್ಯೆ ನಿವಾರಣೆ ಜತೆಗೆ ಮಹಿಳೆಯರಿಗೆ ಉದ್ಯೋಗ ಸೃಷ್ಟಿಗೆ ಸರಕಾರ ಅವಕಾಶ ಮಾಡಿದೆ. ಆದ್ದರಿಂದ ತರಬೇತಿ ಪಡೆದವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಯಶಸ್ವಿಯಾಗಿ ಎಂದು ಹಾರೈಸಿದರು.
ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ನೀರಿನ ಅಭಾವ ಹೆಚ್ಚಾಗಬಹುದು. ಹೀಗಾಗಿ ಟಾಸ್ಕ್‌ಫೋರ್ಸ್ ಸಭೆ ಕರೆದು ನೀರಿನ ಸಮಸ್ಯೆ ನೀಗಿಸಲು ಕ್ರಮ ವಹಿಸುವ ಭರವಸೆ ನೀಡಿದರು.
ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ವಿಜಯ್ ಮಾತನಾಡಿ, ಹಿಂದೆ ಗಂಧದ ಕಡ್ಡಿ, ಮೇಣದ ಬತ್ತಿ ತಯಾರಿಕೆಗೆ ತರಬೇತಿಗಳು ಸೀಮಿತವಾಗಿದ್ದ ಕಾರಣ ಉದ್ಯೋಗ ಕೊಡುವ ಅವಕಾಶ ಸಿಗಲಿಲ್ಲ. ಈಗ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಯಿಂದ ಸಾಕಷ್ಟು ಅನುಕೂಲ ಆಗುತ್ತಿದೆ. ಇದು ಸಾಧ್ಯವಾಗಲು ಎಚ್.ಎಸ್.ಮಹದೇವಪ್ರಸಾದ್ ಅವರ ದೂರದೃಷ್ಟಿ ಕಾರಣ ಎಂದು ಸ್ಮರಿಸಿದರು.
ಜಿಟಿಟಿಸಿ ಪ್ರಾಂಶುಪಾಲ ಎಸ್. ವಿನಯ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಹನಪೂರ್ಣಿಮ, ಜಿಲ್ಲಾ ಕೌಶಲಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲೇಶ್, ಸಹಾಯಕ ಸಾಂಖಿಕ ಅಧಿಕಾರಿ ಬಿ.ಕೆ.ನಂದೇಶ್, ಕೆ.ಸುಭಾಷ್‌ಚಂದ್ರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net