ಭಾವಚಿತ್ರಕ್ಕೆ ಪುಷ್ಪನಮನ ಸಮರ್ಪಣೆ

ಹನೂರಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಡಾ. ಶಿವಕುಮಾರ ಸ್ವಾಮೀಜಿ ಜಯಂತಿಯನ್ನು ಬುಧವಾರ ಆಚರಿಸಲಾಯಿತು. ಸೋಮಶೇಖರ್, ಬಸವರಾಜಪ್ಪ, ಮುರುಡೇಶ್ವರಸ್ವಾಮಿ, ಜಗದೀಶ್ ಇತರರಿದ್ದರು.
ಹನೂರಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಡಾ. ಶಿವಕುಮಾರ ಸ್ವಾಮೀಜಿ ಜಯಂತಿಯನ್ನು ಬುಧವಾರ ಆಚರಿಸಲಾಯಿತು. ಸೋಮಶೇಖರ್, ಬಸವರಾಜಪ್ಪ, ಮುರುಡೇಶ್ವರಸ್ವಾಮಿ, ಜಗದೀಶ್ ಇತರರಿದ್ದರು.
Published on
ಹನೂರು : ಡಾ. ಶಿವಕುಮಾರ ಸ್ವಾಮೀಜಿ ಅವರು ತ್ರಿವಿಧ ದಾಸೋಹದ ಜತೆಗೆ ಬಡ ಮಕ್ಕಳ ಶಿಕ್ಷಣಕ್ಕೆ ಆಶಾಕಿರಣವಾಗಿದ್ದರು ಎಂದು ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಬುಧವಾರ ಆಯೋಜಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣ ನಿತ್ಯವೂ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1930ರಲ್ಲಿ ಸಿದ್ದಗಂಗಾ ಮಠದ ಜವಾಬ್ದಾರಿಯನ್ನು ಹೊತ್ತ ಡಾ.ಶಿವಕುಮಾರ ಸ್ವಾಮೀಜಿ ಈ ಪರಂಪರೆ ಮುಂದುವರಿಸಿ ಜ್ಞಾನ ದಾಸೋಹವನ್ನೂ ಮಾಡಿದರು ಎಂದರು.
ಮಠದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲರಿಗೂ ಆಶ್ರಯ ನೀಡಿ, ಅನ್ನ ಮತ್ತು ಅಕ್ಷರ ಜ್ಞಾನವನ್ನೂ ಧಾರೆ ಎರೆದರು. ಬಸವಾದಿ ಶರಣರ ತತ್ವಾದರ್ಶಗಳೇ ಇವರ ಉಸಿರಾಗಿತ್ತು. ದೇಶ ಹಾಗೂ ಸಮಾಜದ ಪ್ರಗತಿಯ ಬಗ್ಗೆ ಕಳಕಳಿ ಪ್ರಧಾನವಾಗಿತ್ತು. ಹಾಗಾಗಿ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಸೇವೆಯಲ್ಲಿ ಆಶ್ರಯದಾತರಾಗಿದ್ದರು. ತ್ರಿವಿಧ ದಾಸೋಹವನ್ನು ನಡೆಸುತ್ತಾ ಬಂದರು.
ಇದಕ್ಕಾಗಿ ಅವರಿಗೆ ವಿಶ್ವವ್ಯಾಪಿ ಜನಮನ್ನಣೆ ದೊರಕಿತು ಎಂದರು. 21ನೇ ಶತಮಾನದಲ್ಲಿ ನಡೆದಾಡುವ ದೇವರು ಎಂದೇ ಅವರು ಖ್ಯಾತಿ ಗಳಿಸಿದ್ದರು. ಆದ್ದರಿಂದ ಇವರ ಆದರ್ಶ ಸಮಾಜಕ್ಕೆ ದಾರಿದೀಪವಾಗಿದೆ ಎಂದರು. ಇದೇ ಸಂದರ್ಭ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೂ ಪುಷ್ಪನಮನ ಸಲ್ಲಿಸುವ ಮೂಲಕ ಅವರ ಜಯಂತಿಯನ್ನೂ ಆಚರಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸಲಾಯಿತು.
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ನಿರ್ದೆಶಕ ಕಣ್ಣೂರು ಬಸವರಾಜಪ್ಪ, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ತಾಲೂಕು ಮಹಾಸಭಾದ ಕಾರ್ಯದರ್ಶಿ ಮಂಗಲ ಕುಮಾರ್, ನಿರ್ದೇಶಕರಾದ ಜಗದೀಶ್, ವಿನೋದ್, ಕಣ್ಣೂರು ನಾಗೇಂದ್ರ, ಮುಖಂಡರಾದ ಸಿದ್ದಪ್ಪ, ಅಮೋಘ, ನಟರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net