ಸರ್ವೆಗೂ ಮೊದಲು ಜಿಲ್ಲೆಯಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವ್ಯವಸ್ಥೆಯಡಿ ಒಟ್ಟು 1,75,544 ಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದರು. 60-64 ವರ್ಷದೊಳಗಿನ ವೃದ್ಧರಿಗೆ ಪ್ರತಿ ತಿಂಗಳು 600 ರೂ., 65 ವರ್ಷ ಮೇಲ್ಪಟ್ಟವರಿಗೆ 1200 ರೂ. ವೃದ್ಧಾಪ್ಯ ವೇತನ ದೊರೆಯುತ್ತದೆ. ಈ ಯೋಜನೆಯಡಿ 109463 ವೃದ್ಧರು ಪಿಂಚಣಿ ಪಡೆಯುತ್ತಿದ್ದರು. ಗಂಡ ಮೃತಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 800 ರೂ. ವಿಧವಾ ವೇತನ ಸಿಗುತ್ತದೆ. ಇದನ್ನು 40,272 ಲಾನುಭವಿಗಳು ಪಡೆದುಕೊಳ್ಳುತ್ತಿದ್ದರು. ದೈಹಿಕ ನ್ಯೂನ್ಯತೆ ಶೇ.75ರಷ್ಟಿದ್ದರೆ 800 ರೂ., ಶೇ.75ಕ್ಕಿಂತಲೂ ಹೆಚ್ಚಿದ್ದರೆ 1400 ರೂ., ಬುದ್ಧಿಮಾಂದ್ಯರಾಗಿದ್ದರೆ 2000 ರೂ. ಅಂಗವಿಕಲರ ವೇತನ ದೊರೆಯುತ್ತದೆ. ಇದನ್ನು 20560 ಅಂಗವಿಕಲರು ತೆಗೆದುಕೊಳ್ಳುತ್ತಿದ್ದರು. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ 1200 ರೂ. ದೊರೆಯುತ್ತದೆ. ಇದನ್ನು 32,354 ಲಾನುಭವಿಗಳು ಪಡೆದುಕೊಳ್ಳುತ್ತಿದ್ದರು. ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಡಿ ಪ್ರತಿ ತಿಂಗಳು 800 ರೂ.ಪಿಂಚಣಿ ದೊರೆಯುತ್ತದೆ. ಈ ಸೌಲಭ್ಯಕ್ಕೆ 8777 ಮಹಿಳೆಯರು ಲಾನುಭವಿಗಳಿದ್ದರು. ಲಿಂಗತ್ವ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯಡಿ ಪ್ರತಿ ತಿಂಗಳು 1400 ರೂ.ಗಳು ಸಿಗುತ್ತದೆ. ಇದನ್ನು 88 ಲಿಂಗತ್ವ ಅಲ್ಪಸಂಖ್ಯಾತರು ತೆಗೆದುಕೊಳ್ಳುತ್ತಿದ್ದರು. ಆತ್ಮಹತ್ಯೆಗೆ ಶರಣಾದ ರೈತರ ಪತ್ನಿಯರಿಗೆ ರೈತ ವಿಧವಾ ವೇತನ 2000 ರೂ.ಗಳನ್ನು ನೀಡಲಾಗುತ್ತದೆ. ಇದನ್ನು 30 ಮಹಿಳೆಯರು ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಇವರಲ್ಲಿ 62235 ಸಂಶಯಾಸ್ಪದ ಅನರ್ಹರಿಗೆ ಪಿಂಚಣಿ ಸ್ಥಗಿತಗೊಂಡಿದೆ. ಉಳಿದ 1,13,309 ಲಾನುಭವಿಗಳಿಗೆ ಮಾತ್ರ ಪಿಂಚಣಿ ದೊರೆಯುತ್ತಿದೆ.