ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ದಿಢೀರ್ ಪ್ರತಿಭಟನೆ

ಕೊಳ್ಳೇಗಾಲದ ತಾ.ಪಂ ಕಚೇರಿ ಆವರಣದಲ್ಲಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ದಿಢೀರ್ ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು.
ಕೊಳ್ಳೇಗಾಲದ ತಾ.ಪಂ ಕಚೇರಿ ಆವರಣದಲ್ಲಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ದಿಢೀರ್ ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಳ್ಳೇಗಾಲ ತಾಪಂ ಇಒ ಕಚೇರಿಗೆ ಆಗಮಿಸಿದ್ದಕ್ಕೆ ಆಕ್ರೋಶ
ಕೊಳ್ಳೇಗಾಲ: ಮೇಲಧಿಕಾರಿಗಳು ಪ್ರತಿಭಟನಾಕಾರರಿಗೆ ಕೊಟ್ಟ ಭರವಸೆಯಂತೆ ಕಡ್ಡಾಯ ರಜೆ ಮೇಲೆ ತೆರಳಬೇಕಿದ್ದ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಬುಧವಾರ ಕಚೇರಿಗೆ ಆಗಮಿಸಿದ್ದನ್ನು ವಿರೋಧಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿತು.
ಹೊರಗುತ್ತಿಗೆ ಆಧಾರದ ಮೇಲೆ ತಾಪಂನಲ್ಲಿ ಕಾರ್ಯ ನಿರ್ವಹಿಸುವ ಪರಿಶಿಷ್ಟ ಜಾತಿಯ ಡಿ ಗ್ರೂಪ್ ನೌಕರರು, ಕಂಪ್ಯೂಟರ್ ಆಪರೇಟರ್‌ಗಳನ್ನು ಶೌಚಗೃಹ ತೊಳೆಯುವಂತೆ ಒತ್ತಾಯಿಸಿದ್ದಾರೆ. ತಾಪಂ ಕಚೇರಿಯನ್ನು ಹೊಲಗೇರಿ ಮಾಡುತ್ತಿದ್ದೀರಾ ಎಂದು ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಸಿಬ್ಬಂದಿಗೆ ಮಾನಸಿಕವಾಗಿ ತೊಂದರೆ ನೀಡಿದ್ದು, ಇಒ ಅವರನ್ನು ಅಮಾನತು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶ್ರುತಿ ಹಾಗೂ ತಹಸೀಲ್ದಾರ್ ಬಸವರಾಜು, ತಾ.ಪಂ.ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ತಕ್ಷಣದಿಂದಲೇ ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು. ಜತೆಗೆ ತನಿಖೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ಹೋರಾಟಗಾರರ ಅಮಾನತ್ತಿನ ಆಗ್ರಹವನ್ನು ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟು ವಾಪಸ್ ತೆರಳಿದ್ದರು. ಆದರೆ ಬುಧವಾರ ಬೆಳಗ್ಗೆ ಕಚೇರಿಗೆ ಹಾಜರಾಗಿದ್ದ ಇಒ ಗುರುಶಾಂತಪ್ಪ ಬೆಳ್ಳುಂಗಡಿ ಅವರು ಕಚೇರಿಯಲ್ಲಿದ್ದ ಕೆಲವು ಕಡತಗಳು ಮತ್ತು ಆಧಿಕಾರಿ, ಸಿಬ್ಬಂದಿಯನ್ನು ತಮ್ಮ ಇಲಾಖೆಯ ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಚಾಮರಾಜನಗರಕ್ಕೆ ತೆರಳಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪ್ರಗತಿಪರ ಸಂಘಟನೆ ಸಂಚಾಲಕರು ಮತ್ತೆ ಪ್ರತಿಭಟನೆ ಕೈಗೊಂಡರಲ್ಲದೆ, ಇಒ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗುತ್ತದೆ ಎಂದು ಜಿ.ಪಂ.ಉಪ ಕಾರ್ಯದರ್ಶಿ ಶ್ರುತಿ ಹಾಗೂ ತಹಸೀಲ್ದಾರ್ ಬಸವರಾಜು ಅವರು ಹೇಳಿದರಾದರೂ ಇಒ ಕಚೇರಿಗೆ ಬಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ಪ್ರತಿಭಟನಾಕಾರರಿಗೆ ಅಧಿಕಾರಿಗಳು ನೀಡಿದ ಭರವಸೆ ಸುಳ್ಳಾಗಿದೆ ಎಂದು ರೈತ ಮುಖಂಡ ಅಣಗಳ್ಳಿ ಬಸವರಾಜು ಅಕ್ರೋಶ ಹೊರ ಹಾಕಿದರು.
ಬಳಿಕ ಹೋರಾಟಗಾರರು ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳು ಬರುವ ತನಕ ರಸ್ತೆ ತಡೆ ಚಳಿವಳಿ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಸಮಾಧಾನ ಪಡಿಸಿದರು. ನಂತರ ತಹಸೀಲ್ದಾರ್ ಬಸವರಾಜು ಸ್ಥಳಕ್ಕೆ ಆಗಮಿಸಿ, ಈಗಾಗಲೇ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಜಿಪಂ ಉಪ ಕಾರ್ಯದರ್ಶಿ ಶ್ರುತಿ ಅವರು ಕೊಟ್ಟಿರುವ ಭರವಸೆಯಲ್ಲಿ ಬದಲಾವಣೆ ಇಲ್ಲ ಎಂದರು. ಈ ವೇಳೆ ಅಸಮಾಧಾನ ಹೊರಹಾಕಿದ ಹೋರಾಟಗಾರರು, ಕಡ್ಡಾಯ ರಜೆ ಮೇಲೆ ತೆರಳುತ್ತಾರೆ ಎಂದು ಹೇಳಿದ ಮೇಲೂ ಇಒ ಕಚೇರಿಗೆ ಆಗಮಿಸಿದ್ದಾರೆ.
ಕಚೇರಿ ವಾಹನವನ್ನು ಬಳಸಿದ್ದಾರೆ ಎಂದು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸಿಲ್ದಾರ್ ಬಸವರಾಜು, ಇಒ ತಮ್ಮ ಕಚೇರಿ ಸಿಬ್ಬಂದಿಗೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಸಿಇಒ ಅವರ ಬಳಿ ಮನವರಿಕೆ ಮಾಡಿಕೊಡಲು ಸಿಬ್ಬಂದಿಯನ್ನು ಕರೆದೊಯ್ದಿದ್ದಾರೆ. ತಾ.ಪಂ.ಇಒ ಅವರನ್ನು ರಜೆ ಮೇಲೆ ಕಳುಹಿಸಿ ಎಂದು ಜಿಪಂ ಸಿಇಒ ಆದೇಶ ಹೊರಡಿಸಲಿದ್ದಾರೆ ಎಂದಾಗ, ಆದೇಶ ಪ್ರತಿ ಬಂದ ಮೇಲೆ ಪ್ರತಿಭಟನೆ ಅಂತ್ಯಗೊಳಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು. ಇದಾದ ಕೆಲ ಸಮಯದ ಬಳಿಕ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ಮೇ 7ರಿಂದ 26 ರವರೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಿರುವುದರ ಜತೆಗೆ ಪ್ರಭಾರವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಎಇಇ ಕುಮಾರ್ ಅವರಿಗೆ ವಹಿಸಿರುವ ಕುರಿತು ರಜೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಆದೇಶ ಪ್ರತಿ ಕೈಸೇರಲಾಗಿ ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ, ಜಿಪಂ ಮಾಜಿ ಸದಸ್ಯ ನಾಗರಾಜ್ ಕಮಲ್, ರೈತ ಮುಖಂಡ ಅಣಗಳ್ಳಿ ಬಸವರಾಜು, ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅಯಾಜ್ ಕನ್ನಡಿಗ, ಮುಖಂಡರಾದ ದಿಲೀಪ್ ಸಿದ್ದಪ್ಪಾಜಿ, ಶಂಕರ್, ಎಸ್.ಸಿದ್ದಪ್ಪಾಜಿ, ಚಾಮರಾಜು, ತೇರಂಬಳ್ಳಿ ಶಿವಣ್ಣ, ರೈತ ಮುಖಂಡರಾದ ದಶರಥ್, ರಾಮಕೃಷ್ಣ, ಮಹಿಳಾ ಸಂಘಟನೆಯ ಪುಟ್ಟಮ್ಮ, ಪುಟ್ಟಗೌರಿ, ಶಿವಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net