ಬದುಕು ಕಟ್ಟಿಕೊಟ್ಟ ಯಶಸ್ವಿ ಬೇಸಾಯ

ಮಂಗಲ ಗ್ರಾಮದ ಪ್ರಭುಸ್ವಾಮಿ ಅವರ ಜಮೀನಿನಲ್ಲಿ ಬೆಳೆದಿರುವ ಪಪ್ಪಾಯ ಫಸಲು.
ಮಂಗಲ ಗ್ರಾಮದ ಪ್ರಭುಸ್ವಾಮಿ ಅವರ ಜಮೀನಿನಲ್ಲಿ ಬೆಳೆದಿರುವ ಪಪ್ಪಾಯ ಫಸಲು.
Published on

ಪ್ರಮುಖ ಮುಖ್ಯಾಂಶಗಳು

  • ಮಾದರಿಯಾದ ಮಂಗಲ ಗ್ರಾಮದ ರೈತ ಪ್ರಭುಸ್ವಾಮಿ
  • ಕೈಹಿಡಿದ ಸಮಗ್ರ ಕೃಷಿ ಪದ್ಧತಿ
ಹನೂರು: ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾದೆ ಎಂದು ಹತಾಶೆಗೊಳಗಾಗದೆ ಭೂಮಿ ತಾಯಿಯನ್ನು ನಂಬಿ ಸಂಪೂರ್ಣ ಕೃಷಿಯಲ್ಲಿ ತೊಡಗಿದ ಇಲ್ಲೊಬ್ಬ ರೈತ ವಿವಿಧ ಬೆಳೆಗಳನ್ನು ಬೆಳೆದು ಯಶಸ್ಸು ಹೊಂದುವ ಮೂಲಕ ನೆಮ್ಮದಿ ಜೀವನ ರೂಪಿಸಿಕೊಂಡಿದ್ದಾರೆ.
ತಾಲೂಕಿನ ಮಂಗಲ ಗ್ರಾಮದ ಸುಮಿತ್ರಮ್ಮ ಮತ್ತು ಶಿವರುದ್ರಪ್ಪ ದಂಪತಿ ಪುತ್ರ ಪ್ರಭುಸ್ವಾಮಿ ಯಶಸ್ವಿ ರೈತ. ಕೃಷಿ ಕುಟುಂಬದಲ್ಲಿ ಜನಿಸಿದ ಪ್ರಭುಸ್ವಾಮಿ ಶಾಲಾ ಹಂತದಲ್ಲೇ ತಂದೆಯ ಜತೆಗೂಡಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಶಿಕ್ಷಣದ ಬಗ್ಗೆ ಇಚ್ಛಾಶಕ್ತಿಯ ಕೊರತೆ ಇತ್ತು. ಇದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾಗಬೇಕಾಯಿತು. ಬಳಿಕ 2 ವರ್ಷ ತಂದೆಯೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಕೊಂಡರು. ಇತರ ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದಿರುವುದನ್ನು ಮನಗಂಡರು. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದರೇನು ಉತ್ತಮ ಜೀವನ ರೂಪಿಸಿಕೊಳ್ಳಲು ಕೃಷಿಯೇ ಮೂಲಾಧಾರ ಎಂಬುದನ್ನು ಅರಿತು ಈ ಬಗ್ಗೆ ದೃಢ ನಿರ್ಧಾರ ಮಾಡಿ ವಯಸ್ಸಾದ ತಂದೆಯ ಮಾರ್ಗದರ್ಶನದಲ್ಲಿ ಸ್ವತಃ ಕೃಷಿ ಮಾಡಲು ಆರಂಭಿಸಿದರು. ಪ್ರಾರಂಭದಲ್ಲಿ ಕಷ್ಟ ಎನಿಸಿದರೂ ಕಾಲಕ್ರಮೇಣ ಜೀವನಕ್ಕೆ ಕೃಷಿಯೇ ಉತ್ತಮ ಮಾರ್ಗ ಎಂಬುದನ್ನು ಅರಿತು ವಿವಿಧ ಬೆಳೆಗಳನ್ನು ಬೆಳೆದು ಯಶಸ್ಸು ಕಂಡರು. ಕಳೆದ 10 ವರ್ಷದಿಂದ ಸಂಪೂರ್ಣ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಮೂರೂವರೆ ಎಕರೆಯಲ್ಲಿ ವಿವಿಧ ಬೆಳೆ: ಮಂಗಲ ಸಮೀಪದ ಕಾಮಗೆರೆಯ ಬಳಿ ಎರಡೂವರೆ ಎಕರೆ ಜಮೀನಿದ್ದು, ಕೃಷಿಗೆ ಧುಮುಕಿದ ಆರಂಭದಲ್ಲಿ ಏಲಕ್ಕೆ ಬಾಳೆ ಬೆಳೆದರು. ಇದು ಉತ್ತಮ ಇಳುವರಿಯೊಂದಿಗೆ ಆದಾಯ ತಂದು ಕೊಟ್ಟಿತು. ಅಲ್ಲದೆ ಇದು ಕೃಷಿಯ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ಹೆಚ್ಚಿಸುವಂತೆ ಮಾಡಿತು. ಬಳಿಕ ಅರಿಶಿಣ, ಮುಸುಕಿನ ಜೋಳ, ಅವರೆ, ಟೊಮ್ಯಾಟೊ, ಬೀನ್ಸ್, ಬದನೆ ಜತೆಗೆ ಇತರ ತರಕಾರಿ ಬೆಳೆಗಳನ್ನು ಬೆಳೆದು ಸಫಲತೆ ಸಾಧಿಸಿದರು. ಇದೀಗ ಎರಡೂವರೆ ಎಕರೆ ಜಮೀನಿನ ಪೈಕಿ 1 ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದು, ಫಸಲು ಸಮೃದ್ಧಿಯಿಂದ ಕೂಡುವ ಮೂಲಕ ಉತ್ತಮ ಫಲ ನೀಡಿದೆ. ಇನ್ನು ಒಂದೂವರೆ ಎಕರೆಯಲ್ಲಿ ಉದ್ದು ಬೆಳೆದಿದ್ದಾರೆ. ಪ್ರತಿ ವರ್ಷ ಕೃಷಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಇವರು ಕೃಷಿಯ ವ್ಯಾಮೋಹ ಹೆಚ್ಚಾಗಿ ಸಮೀಪದಲ್ಲಿಯೇ 1 ಎಕರೆಯನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಅಲ್ಲಿ ಟೊಮ್ಯಾಟೊ ಹಾಗೂ ಬದನೆ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ವಿವಿಧ ಬೆಳೆಗಳನ್ನು ಬೆಳೆಯುವುದರ ಮೂಲಕ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ.
ಸಂಪೂರ್ಣ ಹನಿ ನೀರಾವರಿ ವ್ಯವಸ್ಥೆ: ಗುಂಡಾಲ್ ಜಲಾಶಯದ ನಾಲೆ ಹಾದು ಹೋಗಿರುವ ಮಾರ್ಗದಲ್ಲಿ ಜಮೀನನ್ನು ಹೊಂದಿದ್ದು, 3 ಬೋರ್ ಕೊರೆಸಿದ್ದಾರೆ. ನೀರಾವರಿ ಸೌಕರ್ಯ ಉತ್ತಮವಾಗಿದ್ದು, ಸಂಪೂರ್ಣ ಹನಿ ನೀರಾವರಿ ವ್ಯವಸ್ಥೆ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಇನ್ನು ಕೊಟ್ಟಿಗೆ ಗೊಬ್ಬರವನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಕೃಷಿಯ ಬಗ್ಗೆ ಇನ್ನಿಲ್ಲದ ಆಸಕ್ತಿ ವಹಿಸಿರುವ ಇವರು ಉತ್ತಮ ಇಳುವರಿಯನ್ನು ಪಡೆಯುವ ಸಲುವಾಗಿ ಕಾಲಕಾಲಕ್ಕೆ ಔಷಧವನ್ನು ಸಿಂಪಡಿಸುವುದದರ ಮೂಲಕ ಬೆಳೆಗಳಿಗೆ ರೋಗಬಾಧೆ ತಗುಲದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆ ಮೂಲಕ ಸಂಪೂರ್ಣ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಸಹೋದರನ ಸಾಥ್
ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ಧತಿ ಅನುಸರಿಸುವ ಇವರಿಗೆ ಜಮೀನಿನಲ್ಲಿರುವ 50 ತೆಂಗಿನ ಮರಗಳು ಫಲ ನೀಡುತ್ತಿದ್ದು, ಉತ್ತಮ ಆದಾಯ ತಂದು ಕೊಡುತ್ತಿದೆ. ಇದು ಜೀವನ ನಿರ್ವಹಣೆಗೆ ಸಹಕಾರಿಯಾಗಿದೆ. ಇನ್ನು ಜಮೀನಿನಲ್ಲಿ ಸಪೋಟ ಹಾಗೂ ಮಾವಿನ ಮರಗಳಿಂದಲೂ ಪ್ರತಿ ವರ್ಷ ಆದಾಯ ಬರುತ್ತಿದೆ. ಸಹೋದರ ರಾಜಶೇಖರ್ ಸಹ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಅಣ್ಣನ ಕೃಷಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೃಷಿಯು ನೆಮ್ಮದಿಯ ಜತೆಗೆ ಉತ್ತಮ ಆದಾಯ ಬರುತ್ತಿರುವುದರಿಂದ ಉತ್ತಮ ಜೀವನವನ್ನು ರೂಪಿಸಿಕೊಟ್ಟಿದೆ. ಕೃಷಿಯಿಂದ ಬರುವ ಆದಾಯದಿಂದಲೇ ಮಕ್ಕಳನ್ನು ಓದಿಸುತ್ತಿದ್ದೇನೆ ಎನ್ನುತ್ತಾರೆ ರೈತ ಪ್ರಭುಸ್ವಾಮಿ.
ಹೈನುಗಾರಿಕೆಯತ್ತ ಚಿತ್ತ: ರೈತ ಪ್ರಭುಸ್ವಾಮಿ ಅವರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ರೈತರಿಂದ ಹಾಲು ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಕೃಷಿಯಲ್ಲಿ ತೊಡಗಿರುವ ಇವರು ರೈತರಿಂದ ಪ್ರೇರಣೆಗೊಂಡಿದ್ದು, ಹೈನುಗಾರಿಕೆಯನ್ನು ಆರಂಭಿಸಬೇಕು ಎನ್ನುವ ಚಿಂತೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಒಟ್ಟಿನಲ್ಲಿ ಶಿಕ್ಷಣ ಉತ್ತಮ ಭವಿಷ್ಯಕ್ಕೆ ದಾರಿದೀಪ. ಆದರೆ ಕೈ ಹಿಡಿಯಲಿಲ್ಲವೆಂದರೆ ಇತರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂಬುದನ್ನು ಪ್ರಭುಸ್ವಾಮಿ ಅವರು ಕೃಷಿಯಲ್ಲಿ ತೋರಿಸಿಕೊಟ್ಟಿದ್ದಾರೆ.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net