ಉಡುತೊರೆ ಹಳ್ಳ ಜಲಾಶಯದ ನೀರಾವರಿ ಯೋಜನೆಗೆ 490 ಕೋಟಿ ರೂ.ನೀಡಿದ ಹಿನ್ನೆಲೆ
ಹನೂರು: ಈ ಬಾರಿಯ ಬಜೆಟ್‌ನಲ್ಲಿ 490 ಕೋಟಿ ರೂ.ವೆಚ್ಚದ ಉಡುತೊರೆ ಹಳ್ಳ ಜಲಾಶಯದ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ವಿದ್ಯಾರ್ಥಿನಿ ವರ್ಣಿಕಾ ಅಭಿನಂದನೆ ಸಲ್ಲಿಸಿದ್ದಾಳೆ.
ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರಾಮಾಪುರ ಹೋಬಳಿಯಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಬರದ ಛಾಯೆ ಆವರಿಸಿತ್ತು. ಇದರಿಂದ 2025ರ ಜು.6ರಂದು ರಾಮಾಪುರ ಸಮೀಪದ ಕೆಂಪಯ್ಯನಹಟ್ಟಿ ಗ್ರಾಮದ ವರ್ಣಿಕಾ ಸೇರಿದಂತೆ ಸಹಪಾಠಿ ವಿದ್ಯಾರ್ಥಿಗಳಾದ ಮೀನಾ, ಶ್ರೀಕಂಠ ಹಾಗೂ ಋಷಿಕೇಶ್ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ನೀರಿನ ಸಮಸ್ಯೆಯಿಂದ ಜನರು ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಈ ಭಾಗದ ಕೆರೆ, ಕಟ್ಟೆಗಳಿಗೆ ಕಾವೇರಿ ನೀರು ತುಂಬಿಸಿ ನೀರಾವರಿ ಸೌಕರ್ಯ ಕಲ್ಪಿಸುವಂತೆ ಪತ್ರ ಬರೆದು ಮನವಿ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ 490 ಕೋಟಿ ರೂ.ವೆಚ್ಚದ ಉಡುತೊರೆ ಹಳ್ಳ ಜಲಾಶಯದ ನೀರಾವರಿ ಯೋಜನೆಗೆ ಅನುಮೋದನೆ ದೊರೆತ ಹಿನ್ನೆಲೆ ವಿದ್ಯಾರ್ಥಿನಿ ವರ್ಣಿಕಾ, ಸಿಎಂ ಸಿದ್ದರಾಮಯ್ಯ, ಶಾಸಕ ಎಂ.ಆರ್.ಮಂಜುನಾಥ್ ಹಾಗೂ ರೈತ ಸಂಘಟನೆಗಳಿಗೆ ಧನ್ಯವಾದ ತಿಳಿಸಿದ್ದು, ಯೋಜನೆಯ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದಾಳೆ.