ಸಮುದಾಯ ಒಡೆಯುವ ಕೆಲಸ ನಿಲ್ಲಲಿ

ಯಳಂದೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಂಗಳವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಲಾರ್ಪಣೆ ಮಾಡಿದರು.
ಯಳಂದೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಂಗಳವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಲಾರ್ಪಣೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • *ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿಕೆ
ಯಳಂದೂರು: ತುಳಿತಕ್ಕೊಳಗಾದವರು, ಶೋಷಿತರು, ಬಡವರು, ಮಹಿಳೆಯರ ಬದುಕನ್ನು ಹಸನುಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಂಬೇಡ್ಕರ್‌ರ ಬದುಕನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ಅನುಸರಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.
ತಾಲೂಕು ಆಡಳಿತ ಹಾಗೂ ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 135 ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ದೇಶದ ಮಹಿಳಾ ವಿಮೋಚಕ ಅಂಬೇಡ್ಕರ್ ಎಂಬುದು ನಿರ್ವೀವಾದ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸರಿಸಮಾನರಾಗಿದ್ದು, ಅವರಿಗೆ ಅವಕಾಶ ನೀಡಬೇಕು ಎಂಬುದನ್ನು ಸಂವಿಧಾನದಲ್ಲಿ ತಿಳಿಸಿದ್ದರಿಂದಲೇ ಪ್ರಸ್ತುತ ದೇಶದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಇರುವಂತಾಗಿದೆ ಎಂದರು.
ಪರಿಶಿಷ್ಟರ ಆಶಾಕಿರಣವಾಗಿದ್ದ ಅಂಬೇಡ್ಕರ್‌ರು ಸಮುದಾಯದ ಉದ್ಧಾರಕರಾಗಿದ್ದಾರೆ. ಆದರೆ ಇಲ್ಲೂ ಕೂಡ ರಾಜಕೀಯ ನಡೆಯುತ್ತಿದ್ದು, ಇಂತಹ ಸಮುದಾಯವನ್ನು ಒಡೆಯುವ ಕೆಲಸವಾಗುತ್ತಿರುವುದು ಬೇಸರದ ಸಂಗತಿ. ಹಾಗಾಗಿ ಈ ಪ್ರವೃತ್ತಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಭೋಗಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪಿ.ದೇವರಾಜು ಮಾತನಾಡಿ, ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆ ಅಂಬೇಡ್ಕರ್ ನಮಗೆ ಕಲಿಸಿದ ಪಾಠಗಳಾಗಿವೆ. ಆದರೆ ನಾವು ಇಂದು ಒಂದು ಸಮೀಕ್ಷೆ ಪ್ರಕಾರ ದೇಶದಲ್ಲಿ ಅಂಬೇಡ್ಕರ್‌ರ 1.25 ಕೋಟಿ ಪ್ರತಿಮೆಗಳನ್ನು ನಿರ್ಮಿಸಿ ಕುಡಿತದಂತಹ ಕೆಟ್ಟ ಹವ್ಯಾಸಗಳ ದಾಸರಾಗಿದ್ದೇವೆ. ಇದನ್ನು ಬಿಡಬೇಕು. ಪಂಚಶೀಲ ತತ್ವಗಳನ್ನು ರೂಢಿಸಿಕೊಳ್ಳಬೇಕು. ನಮಗೆ ಸ್ವಾತಂತ್ರೃ ಬಂದು 75 ವರ್ಷ ಕಳೆದರೂ ಮೀಸಲಾತಿಯ ಅರ್ಥ ಇನ್ನೂ ತಿಳಿದಿಲ್ಲ. ಮೌಢ್ಯ, ಕಂದಾಚಾರ, ಧಾರ್ಮಿಕ ಮೂಢನಂಬಿಕೆಯಿಂದ ನಾವು ದೂರ ಇರಬೇಕು. ಆ ಮೂಲಕ ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕೆ ದುಡಿದರೆ ಅಂಬೇಡ್ಕರ್ ಶ್ರಮ ಸಾರ್ಥಕವಾಗುತ್ತದೆ ಎಂದರು.
ತಿ.ನರಸೀಪುರ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ದೇಶದ ಸರ್ವ ಜನರಿಗೂ ಅಂಬೇಡ್ಕರ್ ಸಂವಿಧಾನದಿಂದ ಅನುಕೂಲವಾಗಿದೆ. ಹಾಗಾಗಿ ಎಲ್ಲರೂ ಅವರ ಜಯಂತಿ ಆಚರಿಸುವಂತಾಗಬೇಕು. ಯುದ್ಧದ ಇಂತಹ ಸಂದರ್ಭದಲ್ಲಿ ನಮಗೆ ಬುದ್ಧ ಆದರ್ಶವಾಗಬೇಕು. ಬುದ್ಧರ ಶಾಂತಿ, ಕಬೀರರರ ಸಮಾನತೆ ಹಾಗೂ ಫುಲೆ ಅವರ ಶಿಕ್ಷಣ ನಮಗೆ ಆದರ್ಶವಾಗಬೇಕು. ಕರುಣೆ, ಪ್ರೀತಿ, ಮೈತ್ರಿ ನಮಲ್ಲಿರಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ. ಮಹೇಶ್, ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಅಂಬೇಡ್ಕರ್ ಸೇವಾ ಸಮತಿ ಅಧ್ಯಕ್ಷ ಸಿದ್ದರಾಜು, ತಹಸೀಲ್ದಾರ್ ಎಸ್.ಎಲ್.ನಯನಾ, ಇಒ ಎ.ಬಿ.ವೇಣು, ಬಿಇಒ ಎಂ.ಮಾರಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಎಂ.ಕೇಶವಮೂರ್ತಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಪಪಂ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಮಾಂಬಳ್ಳಿ ನಂಜುಂಡಸ್ವಾಮಿ, ಕಿನಕಹಳ್ಳಿ ರಾಚಯ್ಯ ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net