ಹೊಟ್ಟೆ ಪಾಡೇ ‘ದೇವರಿಗೆ ಹಾಡು’..!

ಭಕ್ತರಿಲ್ಲದೆ ಬಿಕೋ ಎನ್ನುತ್ತಿರುವ ನಾಗಮಲೆ ಕ್ಷೇತ್ರದ ಮಾರ್ಗದಲ್ಲಿ ಸಿಗುವ ಇಂಡಿಗನತ್ತ ಗ್ರಾಮ
ಭಕ್ತರಿಲ್ಲದೆ ಬಿಕೋ ಎನ್ನುತ್ತಿರುವ ನಾಗಮಲೆ ಕ್ಷೇತ್ರದ ಮಾರ್ಗದಲ್ಲಿ ಸಿಗುವ ಇಂಡಿಗನತ್ತ ಗ್ರಾಮ
Published on

ಪ್ರಮುಖ ಮುಖ್ಯಾಂಶಗಳು

  • ನಾಗಮಲೆಯಲ್ಲಿ ಚಿರತೆ ದಾಳಿ ಹಿನ್ನೆಲೆಗೆ ಪ್ರವೇಶ ನಿರ್ಬಂಧ
  • ಭಕ್ತರನ್ನೇ ನಂಬಿದ್ದ ಕುಗ್ರಾಮಗಳ ಬಡ ವ್ಯಾಪಾರಿಗಳಿಗೆ ಈಗ ಉಂಬುವ ಚಿಂತೆ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಭಕ್ತರು ‘ಮಾಯ್ಕರ ಮಾದಪ್ಪನಿಗೆ ಉೇ’ ಎಂದರೆ, ದೇವರ ಸನ್ನಿಧಿಯ ಹತ್ತಿರದಲ್ಲಿರುವ ನಾಗಮಲೆ ಮಾರ್ಗದ ಕುಗ್ರಾಮಗಳ ಬಡ ವ್ಯಾಪಾರಿಗಳಿಗೆ ತನ್ನ ‘ಹೊಟ್ಟೆಪಾಡೇ ಬೇಡುವ ಹಾಡಾಗಿಬಿಟ್ಟಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಕ್ಷೇತ್ರಕ್ಕೆ ಮೇ 10ರಂದು ಪಾಲಕರೊಂದಿಗೆ ಕಾಲ್ನಡಿಗೆಯಲ್ಲಿ ಬಂದಿದ್ದ ಬಾಲಕನನ್ನು ಚಿರತೆ ಬಲಿ ಪಡೆಯಿತು. ಎಚ್ಚೆತ್ತ ರಾಜ್ಯ ಸರ್ಕಾರ ಭಕ್ತರ ಜೀವ ರಕ್ಷಣೆ ದೃಷ್ಟಿಯಿಂದ ಚಾರಣ ಮಾಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತು. ಅದರಲ್ಲೂ ನಾಗಮಲೆಗೆ ಯುಗಾದಿ, ಶಿವರಾತ್ರಿಗೆ ಮಾತ್ರ ತೆರಳಲು ಅವಕಾಶ ನೀಡಿ ಉಳಿದ ದಿನಗಳಲ್ಲಿ ನಿರ್ಬಂಧ ವಿಧಿಸಲಾಗುತ್ತದೆ ಎನ್ನಲಾಗುತ್ತಿದೆ.
ಈ ರೀತಿ ಮಾಡಿದರೆ ನಾಗಮಲೆ ಕ್ಷೇತ್ರದ ದುರ್ಗಮ ಹಾದಿಯ ಕುಗ್ರಾಮಗಳಲ್ಲಿ ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡು ಗಿರಾಕಿಗಳಾಗಿ ಬರುವ ಭಕ್ತರನ್ನೇ ಕಾಯುವ ವ್ಯಾಪಾರಿಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ವ್ಯಾಪಾರ ವಹಿವಾಟು ಇಲ್ಲದೆ ಜೀವನ ಕಷ್ಟಕರವಾಗಿದೆ. ಆದರೂ ಭಕ್ತರ ಜೀವರಕ್ಷಣೆ ದೃಷ್ಟಿಯಿಂದ ಪ್ರವೇಶ ನಿರ್ಬಂಧ ವಿಧಿಸಿರುವುದು ಸರಿಯಾಗಿದೆ. ಆದರೆ ಒಂದು ಸಮಸ್ಯೆ ಪರಿಹಾರಕ್ಕಾಗಿ ನಿರ್ಧಾರ ಕೈಗೊಂಡ ಬಳಿಕ ಮತ್ತೊಂದು ವ್ಯವಸ್ಥೆಯ ಹೊಟ್ಟೆಪಾಡಿನ ಮೇಲೆ ಹೊಡೆತ ಬಿದ್ದಂತಾಗುತ್ತದೆ. ಎಲ್ಲೆಲ್ಲಿಂದಲೋ ಕ್ಷೇತ್ರಕ್ಕೆ ಬರುವ ಭಕ್ತರು ದೇವರ ಮುಂದೆ ವಿವಿಧ ಕೋರಿಕೆಗಳನ್ನು ಮುಂದಿಟ್ಟರೆ, ಸ್ಥಳೀಯ ನಿವಾಸಿಗಳು ಕನಿಷ್ಟ ಮಟ್ಟದ ಜೀವನ ನಿರ್ವಹಣೆಗಾಗಿ ಕೈ ಮುಗಿದರೆ ಕಣ್ಣ ತುದಿಯಲ್ಲಿ ಜಿನುಗುವ ನೀರನ್ನು ಮುಂದಿಡುವಂತಾಗಿದೆ.
ಬಡತನಕ್ಕೆ ಉಂಬುವ ಚಿಂತೆ:
ಮಹದೇಶ್ವರ ಬೆಟ್ಟದ ನಡುಮಲೆಯಿಂದ ನಾಗಮಲೆಗೆ ಹೋಗುವ ದಾರಿಯಲ್ಲಿ ಹಳೆಯೂರು, ಇಂಡಿಗನತ್ತ, ಪಡಸಲನತ್ತ ಗ್ರಾಮಗಳು ಸಿಗುತ್ತವೆ. ಗುಡ್ಡಗಾಡಿನ ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಮಾಡುವುದು ಇಲ್ಲಿನ ಜನರಿಗೆ ಸವಾಲಿನ ಕೆಲಸ. ಬಂದರೆ ಆದಾಯ, ನಷ್ಟವಾದರೆ ವಿದಾಯ ಹೇಳುವಷ್ಟು ಕಠಿಣವಾಗಿದೆ. ಕೃಷಿಯನ್ನೇ ನಂಬಿ ಬದುಕಲು ಸಾಧ್ಯವಿಲ್ಲ.
ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಸುಮಾರು 13 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಬರುವ ಭಕ್ತರೇ ಗ್ರಾಮಗಳ ಅಂಗಡಿಗಳಿಗೆ ಗಿರಾಕಿಗಳು. ನೀರು, ಮಜ್ಜಿಗೆ, ಆಹಾರ ಪದಾರ್ಥಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದಲೇ ನಡೆಯುತ್ತಿದ್ದ ಜೀವನ ನಿರ್ವಹಣೆ ಮೇಲೆ ಮೇ 10ರಂದು ಬೆಂಗಳೂರಿನ ಬಾಲಕ ಹರ್ಷಿತ್(10) ಮೇಲೆ ನಡೆದ ಚಿರತೆ ದಾಳಿಯ ಘಟನೆ ಹೊಡೆತ ಕೊಟ್ಟಿತು. ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಯಿತು. ಈ ಊರುಗಳಿಗೆ ಮೂಲಸೌಕರ್ಯಗಳನ್ನೇ ಒದಗಿಸಲಾಗದ ರಾಜ್ಯ ಸರ್ಕಾರ ಇಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸಲು ವಿಶೇಷ ಯೋಜನೆ ಮತ್ತು ಕಾರ್ಯಕ್ರಮ ರೂಪಿಸಿಲ್ಲ. ಸ್ಥಳೀಯ ಸಂಪನ್ಮೂಲ, ಸ್ಥಳೀಯ ನಿವಾಸಿಗಳ ಪ್ರತಿಭಾ ಕೌಶಲ್ಯವನ್ನು ಗುರುತಿಸಿ, ತರಬೇತಿ ನೀಡಿ ಗ್ರಾಮ ಮಟ್ಟದಲ್ಲೇ ಜೀವನೋಪಾಯಕ್ಕೆ ದಾರಿ ಮಾಡಿಕೊಡದೆ ಶಿವಶರಣ ಅಂಬಿಗರ ಚೌಡಯ್ಯ ಅವರ ‘ಬಡತನಕ್ಕೆ ಉಂಬುವ ಚಿಂತೆ’ ವಚನದಂತೆ ಗ್ರಾಮಸ್ಥರನ್ನು ಚಿಂತೆಗೆ ತಳ್ಳುವಂತೆ ಮಾಡಿದೆ.
ಎಂದೂ ಮುಗಿಯದ ಯುದ್ಧ ‘ವಲಸೆ’:
ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಹೋಗುವ ದಾರಿಯಲ್ಲಿ ಇಂಡಿಗನತ್ತದವರೆಗೆ ಸ್ವಲ್ಪಮಟ್ಟದಲ್ಲಿ ಸುಗಮವಾಗಿರುವ ದಾರಿಯಲ್ಲಿ ಜೀಪ್‌ಗಳು ಮಾತ್ರ ಸಂಚಾರ ಮಾಡಬಹುದಾಗಿದೆ. ಈ ಹಾದಿ ಸ್ಥಳೀಯ ಚಾಲಕರು ಭಕ್ತರನ್ನು ಜೀಪ್‌ಗಳಲ್ಲಿ ಕರೆದುಕೊಂಡು ಬರುವುದು ಮತ್ತು ಹೋಗುವ ಉದ್ಯೋಗವನ್ನು ಸೃಷ್ಟಿಸಿದೆ. ಆದರೆ ಕೆಲವು ವರ್ಷಗಳ ಹಿಂದೆ ಭಕ್ತರ ಸುರಕ್ಷೆಗಾಗಿ ಜೀಪ್‌ಗಳಲ್ಲಿ ಸಂಚಾರ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಯಿತು. ಅಲ್ಲದೇ, 2024ರ ಜ.26ರಂದು ಪುಷ್ಪಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯ ಕುಮಾರ ಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ಕೊಟ್ಟ ಕಾರಣ ಅರಣ್ಯದೊಳಗೆ ಜನಜಂಗುಳಿ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಚಾರಣ ಪ್ರದೇಶಗಳಿಗೆ ಪ್ರವಾಸಿಗರು ತೆರಳುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಈ ವೇಳೆ ನಾಗಮಲೆಗೂ ಪ್ರವೇಶವಿರಲಿಲ್ಲ. ಆಗಲೂ ಸ್ಥಳೀಯ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿತ್ತು.
ಬಳಿಕ ರಾಜ್ಯ ಸರ್ಕಾರದಿಂದ ಅರಣ್ಯದೊಳಗೆ ಜನಜಂಗುಳಿ ತಪ್ಪಿಸಲು ಚಾರಣ ಪ್ರದೇಶಗಳ ಪ್ರವೇಶಕ್ಕೆ ಆನ್‌ಲೈನ್ ವ್ಯವಸ್ಥೆ ಮಾಡಲಾಯಿತು. ಒಂದು ದಿನಕ್ಕೆ ಇಂತಿಷ್ಟು ಜನರಿಗೆ ಮಾತ್ರ ಪ್ರವೇಶ ನಿಗದಿ ಮಾಡಿ ನಿರ್ಬಂಧವನ್ನು ಹಿಂಪಡೆಯಲಾಯಿತು. ನಾಗಮಲೆಗೆ ತೆರಳಲು ದಿನಕ್ಕೆ 200 ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಯಿತು. ಇದರಿಂದಾಗಿ ಭಕ್ತರನ್ನು ಕರೆತರುತ್ತಿದ್ದ ಜೀಪ್‌ಗಳ ಸಂಚಾರ ಕಡಿಮೆಯಾಯಿತು. ಓಡುತ್ತಿದ್ದ ಜೀಪ್‌ಗಳು ನಿಂತು ಹೋದವು. ಚಾಲಕರಾಗಿ ಕೆಲಸ ಮಾಡುತ್ತಿದ್ದ ಸ್ಥಳೀಯ ನಿವಾಸಿಗಳು ಉದ್ಯೋಗ ಅರಸಿ ಪಕ್ಕದ ತಮಿಳುನಾಡಿನತ್ತ ವಲಸೆ ಹೋದರು. ಈ ರೀತಿಯಲ್ಲೇ ಕಲ್ಲು ಕ್ವಾರಿಯಲ್ಲಿ ಕೆಲಸಕ್ಕೆ ಹೋಗಿದ್ದ ಇಂಡಿಗನತ್ತದ ಯುವಕನೊಬ್ಬ ಅಲ್ಲಿ ಅವಘಡ ಸಂಭವಿಸಿ ಪ್ರಾಣ ಬಿಟ್ಟ. ಇಲ್ಲಿ ಜೀವನ ನಿರ್ವಹಣೆಗಾಗಿ ನಡೆಯುವ ಇಂತಹ ದಯಾನೀಯ ಸ್ಥಿತಿಯ ಉದ್ಯೋಗದ ವಲಸೆ ‘ಎಂದೂ ಮುಗಿಯದ ಯುದ್ಧ’ಕ್ಕೆ ಸಮಾನವಾಗಿ ಹೋಗಿದೆ.
"

ನಾಗಮಲೆಯಲ್ಲಿ ಚಿರತೆ ದಾಳಿ ಮಾಡಿದ್ದರಿಂದ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ನಿರ್ಬಂಧದ ತೀರ್ಮಾನವನ್ನು ಪರಾಮರ್ಶೆ ಮಾಡಲಿ. ಮೊದಲೆಲ್ಲ ನಾಗಮಲೆಗೆ ಒಂದು ದಿನಕ್ಕೆ ಸಾವಿರಾರು ಭಕ್ತರು ಬರುತ್ತಿದ್ದರು. ಗುಂಪು ಗುಂಪಾಗಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ಧಾರ್ಮಿಕ ಕ್ಷೇತ್ರದ ಪಾದಯಾತ್ರೆಯನ್ನು ಚಾರಣವೆಂದು ಭಾವಿಸಿ ದಿನಕ್ಕೆ 200 ಭಕ್ತರಿಗೆ ಮಾತ್ರ ಪ್ರವೇಶ ನೀಡಿದ ಮೇಲೆ ಜನರ ಪಾದಯಾತ್ರೆಯ ಗುಂಪು ಕಡಿಮೆಯಾಯಿತು. ವನ್ಯಜೀವಿಗಳ ದಾಳಿ ಸಂಭವವೂ ಹೆಚ್ಚಾಯಿತು. ಭಕ್ತರನ್ನೇ ನಂಬಿಕೊಂಡು ಅಂಗಡಿ ವ್ಯಾಪಾರ ಮಾಡುತ್ತಿರುವ ಗ್ರಾಮಗಳಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿಬಿಟ್ಟಿದೆ.

— ಸಿದ್ದರಾಜು, ಇಂಡಿಗನತ್ತ, ಮಹದೇಶ್ವರ ಬೆಟ್ಟ



"

ನಾಗಮಲೆಗೆ ಯುಗಾದಿ, ಶಿವರಾತ್ರಿ ವೇಳೆ ಮಾತ್ರ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ನೀಡಬೇಕೆಂಬ ಚರ್ಚೆ ನಡೆಯುತ್ತಿದ್ದ, ಈ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನಾಗಮಲೆ ಕ್ಷೇತ್ರದ ಧಾರ್ಮಿಕ ಪ್ರವಾಸೋದ್ಯಮವನ್ನೇ ಅವಲಂಬಿಸಿ ಸುಮಾರು 100 ಕುಟುಂಬಗಳು ವ್ಯಾಪಾರ ವಹಿವಾಟು ನಡೆಸಿಕೊಂಡು ಜೀವನ ನಡೆಸುತ್ತಿವೆ. ಇವರಿಗಾಗಿ ಪರಿಸರ ಅಭಿವೃದ್ಧಿ ಸಮಿತಿಗಳನ್ನು ರಚಿಸಿ ಸ್ಥಳೀಯರ ಮೂಲಕ ಟಿಕೆಟ್ ವಿತರಣೆ, ಭಕ್ತರಿಗೆ ರಕ್ಷಣೆ, ಅರಣ್ಯದಲ್ಲಿ ಸ್ವಚ್ಛತೆ ಜವಾಬ್ದಾರಿ ನೀಡಿ ಉದ್ಯೋಗ ಕೊಡುವ ಚಿಂತನೆಯೂ ಇದ್ದು, ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ಕಾರ್ಯಾಚರಣೆ ಮುಗಿದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.

— ಭಾಸ್ಕರ್, ಡಿಸಿಎ್, ಮಲೆ ಮಹದೇಶ್ವರ ವನ್ಯಜೀವಿಧಾಮ, ಕೊಳ್ಳೇಗಾಲ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net