ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಕ್ರಮ

ಹನೂರಿನಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಡಾ. ಚಿದಂಬರಂ, ಡಾ. ಪ್ರಕಾಶ್, ಉದ್ದನೂರು ಪ್ರಸಾದ್ ಇತರರು ಇದ್ದರು.
ಹನೂರಿನಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಡಾ. ಚಿದಂಬರಂ, ಡಾ. ಪ್ರಕಾಶ್, ಉದ್ದನೂರು ಪ್ರಸಾದ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • healthcare facilities
ಹನೂರು: ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಯಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಕ್ಷೇತ್ರದ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯ ದೊರೆಯುವಂತೆ ಆಗಲು ಶ್ರಮಿಸುವೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 20.58 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹನೂರು ತಾಲೂಕು ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ಆದರೂ ಜನಸಂಖ್ಯೆಗೆ ತಕ್ಕುದಾಗಿ ಆಸ್ಪತ್ರೆ ವ್ಯವಸ್ಥೆ ಇರಲಿಲ್ಲ. ವೈದ್ಯರು, ಸಿಬ್ಬಂದಿ ಹಾಗೂ ಅಗತ್ಯ ಮೂಲ ಸೌಕರ್ಯದ ಕೊರತೆಯಿಂದ ಸಮರ್ಪಕ ಆರೋಗ್ಯ ಸೇವೆ ದೊರಕುತ್ತಿರಲಿಲ್ಲ. ಇದರಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಕ್ಷೇತ್ರದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಮ.ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 50 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಹಿಂದಿನ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಶ್ರಮಿಸಿದ್ದರು. ಇದೀಗ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಲ ಕೂಡಿ ಬಂದಿದ್ದು, ಸುಸಜ್ಜಿತವಾಗಿ ನಿರ್ಮಾಣವಾಗಲಿದೆ. ಕ್ಷೇತ್ರದ ದೊಡ್ಡಿಂದುವಾಡಿ, ಪಾಳ್ಯ ಹಾಗೂ ಮ.ಬೆಟ್ಟದಲ್ಲಿನ ಆಸ್ಪತ್ರೆ ಮೇಲ್ದರ್ಜೆಗೇರಿದ್ದು, ಸದ್ಯದಲ್ಲಿಯೇ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಡಿಎಚ್‌ಒ ಡಾ. ಚಿದಂಬರಂ ಮಾತನಾಡಿ, ಕ್ಷೇತ್ರದ ದೊಡ್ಡಿಂದುವಾಡಿ, ಪಾಳ್ಯ ಹಾಗೂ ಮ.ಬೆಟ್ಟದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿತ್ತು. ರಾಮಾಪುರದಲ್ಲಿ ಡಯಾಲಿಸಿಸಸ್ ಕೇಂದ್ರವನ್ನು ತೆರೆಯಲಾಗಿತ್ತು. ಆದರೆ ಹನೂರು ಕೇಂದ್ರ ಸ್ಥಾನದಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಈ ಹಿಂದೆ ಪ್ರಯತ್ನಗಳು ನಡೆದರೂ ಸಫಲ ಆಗಿರಲಿಲ್ಲ. ಈ ಬಗ್ಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಸರ್ಕಾರದ ಮಟ್ಟದಲ್ಲಿ ಶ್ರಮ ವಹಿಸಿದ ಪರಿಣಾಮ ಇದೀಗ ಆಸ್ಪತ್ರೆ ಮೇಲ್ದರ್ಜೆಗೇರುತ್ತಿದೆ ಎಂದರು.
ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪಪಂ ಮಾಜಿ ಅಧ್ಯಕ್ಷೆ ಮುಮ್ತಾಜ್‌ಬಾನು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಇ ಜಗದೀಶ್, ಎಇಇ ಗುರುಪ್ರಸಾದ್, ಟಿಎಚ್‌ಒ ಡಾ.ಪ್ರಕಾಶ್, ವೈದ್ಯ ಡಾ. ರಾಜೀವ್, ಗುತ್ತಿಗೆದಾರ ಪ್ರಸಾದ್, ಮುಖಂಡರಾದ ಶಾಗ್ಯ ರವಿ, ನಾಗೇಂದ್ರ ಬಾಬು, ರಾಜಣ್ಣ, ಸಿದ್ದರಾಜು, ವಿಜಯಕುಮಾರ್ ಇತರರಿದ್ದರು.
ಒಡೆಯರಪಾಳ್ಯ, ಪಿಜಿ ಪಾಳ್ಯದ ಆಸ್ಪತ್ರೆಯೂ ಮೇಲ್ದರ್ಜೆಗೆ: ಬಳಿಕ ತಾಲೂಕಿನ ಪಿ.ಜಿ ಪಾಳ್ಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 9.30 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆಯಳ್ಳ ಆಸ್ಪತ್ರೆಯಾಗಿಸುವ ಹಾಗೂ 4.25 ಕೋಟಿ ರೂ. ವೆಚ್ಚದಲ್ಲಿ ಒಡೆಯರಪಾಳ್ಯದ ಸಂಚಾರಿ ಆರೋಗ್ಯ ಘಟಕವನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಕಟ್ಟಡ ನಿರ್ಮಾಣದ ಕಾಮಗಾರಿಗೂ ಶಾಸಕರು ಶಂಕುಸ್ಥಾಪನೆಯನ್ನು ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net