ಹನೂರು ಸಮೀಪದ ಹುಲುಸುಗುಡ್ಡೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕ ನಿರ್ಮಾಣಕ್ಕೆ ಸಚಿವ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಆರ್. ನರೇಂದ್ರ, ಶ್ರೀರೂಪಾ, ಮೋನಾರೋತ್ ಇತರರಿದ್ದರು.
ತಾಲೂಕು ಕೇಂದ್ರ ಹನೂರಿನಲ್ಲಿ ಸರ್ಕಾರಿ ಕಚೇರಿ ಆರಂಭಕ್ಕೆ ಕ್ರಮ ವಹಿಸುವುದಾಗಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಮಂಗಲ ಸಮೀಪದ ಹುಲುಸುಗುಡ್ಡೆಯ ಬಳಿ ಶುಕ್ರವಾರ 7.52 ಕೋಟಿ ರೂ.ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕು ಕೇಂದ್ರ ಹನೂರಿನಲ್ಲಿ ಸಾರಿಗೆ ಬಸ್ ಘಟಕ ಇರಲಿಲ್ಲ. ಇದೀಗ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಇದರಿಂದ ತಾಲೂಕಿನ ಜನರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಹನೂರಿನಲ್ಲಿ ಬಸ್ ಡಿಪೋ ಇಲ್ಲದ ಕಾರಣ ಜನರು ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆ ಎದುರಿಸುತ್ತಿದ್ದರು. ಜತೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಸಮರ್ಪಕ ಬಸ್ ಸೌಕರ್ಯವಿಲ್ಲದ ಪರಿಣಾಮ ತೊಂದರೆ ಅನುಭವಿಸುವಂತಾಗಿತ್ತು. ಕ್ಷೇತ್ರದ ಜನರು ಹಲವು ವರ್ಷಗಳಿಂದಲೂ ಬಸ್ ಘಟಕವನ್ನು ಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ 7.5 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನತೆಗೆ ಉತ್ತಮ ಸೇವೆ ಸಿಗಲಿದೆ ಎಂದು ಹೇಳಿದರು.
ಮಾಜಿ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪಾ, ಸಿಇಒ ಮೋನಾರೋತ್, ತಹಸೀಲ್ದಾರ್ ಕೆ.ಎನ್.ಚೈತ್ರಾ, ತಾಪಂ ಇಒ ಉಮೇಶ್, ತಾಲೂಕು ಘಟಕ ವ್ಯವಸ್ಥಾಪಕ ಭೋಗನಾಯ್ಕ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮುಖಂಡರಾದ ಶಿವಕುಮಾರ್, ಕೊಪ್ಪಾಳಿ ಮಹದೇವನಾಯ್ಕ, ಮಾದೇಶ್, ಮಂಜೇಶ್, ನಟರಾಜು ಇತರರು ಇದ್ದರು.