ಏಳು ದಶಕಗಳ ಬಳಿಕ ವಿಜೃಂಭಣೆಯ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ
ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಬಡಾವಣೆಯಲ್ಲಿ 70 ವರ್ಷಗಳ ನಂತರ ಶುಕ್ರವಾರ ಆಯೋಜಿಸಿದ್ದ ಶ್ರೀ ನಡುಗದ್ದೆ ಬಸವೇಶ್ವರ, ಶ್ರೀ ಬೊಮ್ಮೇಶ್ವರ, ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವದಲ್ಲಿ ದೇವರು ಗುಡ್ಡರು ಕಂಡಾಯಗಳನ್ನು ಹೊತ್ತು ಕೊಂಡ ಹಾಯ್ದರು.
Published on:
Copied
Follow Us
ಕೊಳ್ಳೇಗಾಲ:ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಬಡಾವಣೆಯಲ್ಲಿ 70 ವರ್ಷಗಳ ನಂತರ ಶ್ರೀ ನಡುಗದ್ದೆ ಬಸವೇಶ್ವರ, ಶ್ರೀ ಬೊಮ್ಮೇಶ್ವರ, ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಗುರುವಾರ ರಾತ್ರಿ 9 ಗಂಟೆಗೆ ಶ್ರೀ ಸಿದ್ದಪ್ಪಾಜಿ ದೇವಾಲಯ ಮುಂಭಾಗ ಸಿದ್ಧಪಡಿಸಿದ್ದ ಕೊಂಡಕ್ಕೆ ಮಳ್ಳವಳ್ಳಿ ಹೊನ್ನನಾಯಕನಹಳ್ಳಿ ಮಠದ ಪೀಠಾಧಿಪತಿ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಅಗ್ನಿಸ್ಪರ್ಶ ಮಾಡಿ ಪೂಜೆ ಸಲ್ಲಿಸಿದರು. ಶುಕ್ರವಾರ ಹೊರವಲಯದಲ್ಲಿರುವ ಶ್ರೀ ಬೊಮ್ಮೇಶ್ವರ ದೇವಾಲಯದ ಬಳಿ ಶ್ರೀ ಕ್ಷೇತ್ರ ಕುರುಬನಕಟ್ಟೆ ಮಠದ ಧರ್ಮಾಧಿಕಾರಿ ಬಿ.ಎಸ್ ವರುಣರಾಜೇಂದ್ರ ಅರಸ್ ಅವರ ನೇತೃತ್ವದಲ್ಲಿ ಸತ್ತಿಗೆ, ಕಡ್ಡಾಯಗಳಿಗೆ ಹೂ ಹೊಂಬಾಳೆ ಧರಿಸಿ ಅಲಂಕರಿಸಿ ಪೂಜೆ ಸಲ್ಲಿಸಿದ ಬಳಿಕ ಗ್ರಾಮಕ್ಕೆ ಕಂಡಾಯ ಗಳನ್ನು ಮೆರವಣಿಗೆ ಮೂಲಕ ಗ್ರಾಮದೊಳಗೆ ಕರೆ ತರಲಾಯಿತು.
ಈ ವೇಳೆ ಭಕ್ತಿ-ಭಾವದಿಂದ ಕಂಡಾಯಗಳು ಹೊತ್ತುಕೊಂಡವರನ್ನು ಪ್ರದಕ್ಷಿಣೆ ಮಾಡಿದ ದೇವರ ಗುಡ್ಡರು ನೆರೆದಿದ್ದ ಭಕ್ತರ ಹರ್ಷೋದ್ಘಾರ ನಡುವೆ ಕೊಂಡವನ್ನು ಹಾಯ್ದರು. ಕೊಂಡದ ಮಾಳದಲ್ಲಿ ನೆರೆದಿದ್ದ ಕೊಳ್ಳೇಗಾಲದ ವಿವಿಧ ಗ್ರಾಮಗಳ ಜನರು ಕೊಂಡವನ್ನು ಕಣ್ತುಂಬಿಕೊಂಡರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೊಂಡೋತ್ಸವದ ಹಿನ್ನೆಲೆಯಲ್ಲಿ ಗ್ರಾಮವನ್ನು ಹಸಿರು ತೋರಣ, ರಂಗೋಲಿ, ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಳಿಸಲಾಯಿತು.
ಗ್ರಾಮದ ಯಜಮಾನರಾದ ಚಾಮರಾಜು, ಮಹೇಂದ್ರ, ಮಹದೇವ, ಲಿಂಗರಾಜು, ಸಿ.ಎಂ.ಮಹದೇವ, ಲಕ್ಷಣಮೂರ್ತಿ, ಕಾಂತ ರಾಜು, ಗ್ರಾಪಂ ಸದಸ್ಯ ಮುರುಳಿ, ಮಾಜಿ ಸದಸ್ಯ ಕೆಂಪರಾಜು, ಯುವಕರು, ಮುಖಂಡರು ಸೇರಿದಂತೆ ಸಾವಿರಾರು ಜನರು ಉಪಸ್ಥಿತಿ ಇದ್ದರು.