ದಾಖಲಾತಿಯಲ್ಲಿ ಸೋಲುತ್ತಿದೆ ಸ್ಪೋರ್ಟ್ಸ್ ಹಾಸ್ಟೆಲ್

 ಚಾಮರಾಜನಗರದ ಜಿಲ್ಲಾ ಕ್ರೀಡಾ ವಸತಿ ನಿಲಯ.
ಚಾಮರಾಜನಗರದ ಜಿಲ್ಲಾ ಕ್ರೀಡಾ ವಸತಿ ನಿಲಯ.
Published on

ಪ್ರಮುಖ ಮುಖ್ಯಾಂಶಗಳು

  • ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಕೊರತೆ
  • ವಾಲಿಬಾಲ್ ಹೇಳಿಕೊಡಲು ತರಬೇತಿದಾರರೇ ಇಲ್ಲ
ಚಾಮರಾಜನಗರ: ಜಿಲ್ಲೆಯ ಏಕೈಕ ಕ್ರೀಡಾ ವಸತಿ ನಿಲಯ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಸೋಲಿನ ಸುಳಿಗೆ ಸಿಲುಕಿದೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಒಳಗೆ 2016ರಲ್ಲಿ ನಿರ್ಮಾಣ ಮಾಡಿದ ಜಿಲ್ಲಾ ಕ್ರೀಡಾ ವಸತಿ ನಿಲಯ ಪ್ರಸ್ತುತ ಮಕ್ಕಳ ಕೊರತೆ ಎದುರಿಸುತ್ತಿದೆ. 5ರಿಂದ 7ನೇ ತರಗತಿವರೆಗಿನ ುಟ್‌ಬಾಲ್ ಆಡುವ 25 ವಿದ್ಯಾರ್ಥಿಗಳು ಮತ್ತು ವಾಲಿಬಾಲ್ ಆಡುವ 25 ವಿದ್ಯಾರ್ಥಿಗಳು ಸೇರಿ ಒಟ್ಟು 50 ವಿದ್ಯಾರ್ಥಿಗಳಿಗೆ ಅವರ ದೈಹಿಕ ಸಾಮರ್ಥ್ಯವನ್ನು ಗಮನಿಸಿ ವಸತಿ ಸೌಲಭ್ಯ ನೀಡಲು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹಾಸ್ಟೆಲ್ ಸೌಲಭ್ಯ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳು ನಗರದ ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ತಮಗೆ ಇಷ್ಟಬಂದ ಶಾಲೆಗಳಿಗೆ ಸೇರಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನು ನೀಡಲಾಗುತ್ತದೆ. ುಟ್‌ಬಾಲ್ ಮತ್ತು ವಾಲಿಬಾಲ್ ತರಬೇತಿ ಕೊಡುವುದು, ಕ್ರೀಡಾ ಸಾಮಗ್ರಿ, ಪೌಷ್ಟಿಕ ಆಹಾರ ನೀಡುವುದನ್ನೂ ಮಾಡುತ್ತದೆ. ಆದರೆ ಈ ಸೌಲಭ್ಯವನ್ನು ಕಳೆದ ವರ್ಷ ುಟ್‌ಬಾಲ್ ಕ್ರೀಡೆ ಮೇಲೆ ಆಸಕ್ತಿ ಇರುವ 10-12 ವಿದ್ಯಾರ್ಥಿಗಳು ಮಾತ್ರ ಹಾಸ್ಟೆಲ್‌ಗೆ ಸೇರಿಕೊಂಡು ಬಳಸಿಕೊಂಡಿದ್ದಾರೆ. ವಾಲಿಬಾಲ್ ಮೇಲೆ ಆಸಕ್ತಿ ಇರುವ ವಿದ್ಯಾರ್ಥಿಗಳು ಒಬ್ಬರೂ ಹಾಸ್ಟೆಲ್‌ಗೆ ದಾಖಲಾಗಿಲ್ಲ. ಒಟ್ಟು 50 ವಿದ್ಯಾರ್ಥಿಗಳಿಗಾಗಿ ಕಟ್ಟಿದ ವಸತಿ ನಿಲಯದಲ್ಲಿ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಇದ್ದು, ದಾಖಲಾತಿಯ ಕೊರತೆ ಕಾಡುತ್ತಿದೆ.
ವಾಲಿಬಾಲ್ ಕ್ರೀಡೆಗೆ ತರಬೇತುದಾರರಿಲ್ಲ:
ಕಳೆದ ಮೂರ‌್ನಾಲ್ಕು ವರ್ಷಗಳಿಂದ ಜಿಲ್ಲಾ ಕ್ರೀಡಾ ಹಾಸ್ಟೆಲ್‌ನಲ್ಲಿ ವಾಲಿಬಾಲ್ ಆಟವಾಡುವುದನ್ನು ಹೇಳಿಕೊಡುವ ತರಬೇತುದಾರರೇ ಇಲ್ಲ. ಹೀಗಿರುವಾಗ ವಾಲಿಬಾಲ್ ಮೇಲೆ ಆಸಕ್ತಿ ಇರುವ 25 ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ದಾಖಲು ಮಾಡಿಕೊಂಡು ಏನು ಪ್ರಯೋಜನ? ಇದರಿಂದಲೇ ತರಬೇತುದಾರರೇ ಇಲ್ಲದ ಕ್ರೀಡೆಯನ್ನು ನಂಬಿಕೊಂಡು ಒಬ್ಬ ವಿದ್ಯಾರ್ಥಿಯೂ ವಸತಿನಿಲಯಕ್ಕೆ ದಾಖಲಾಗಿಲ್ಲ. ಇನ್ನು ಇದೇ ಹಾಸ್ಟೆಲ್‌ನಲ್ಲಿ ುಟ್‌ಬಾಲ್ ತರಬೇತುದಾರರು ಇದ್ದಾರೆ. 25 ವಿದ್ಯಾರ್ಥಿಗಳಲ್ಲಿ ಈ ಕ್ರೀಡೆಯ ಮೇಲೆ ಆಸಕ್ತಿ ಇರುವ 10-12 ಮಕ್ಕಳು ಕಳೆದ ವರ್ಷ ವಸತಿ ನಿಲಯಕ್ಕೆ ದಾಖಲಾಗಿದ್ದರು. ಜಿಲ್ಲೆಯಲ್ಲಿ ದಸರಾ ಕ್ರೀಡಾಕೂಟ ಆಯೋಜನೆ ಮಾಡಿದಾಗ 30-40 ವಾಲಿಬಾಲ್ ತಂಡಗಳು ಪಾಲ್ಗೊಳ್ಳುತ್ತವೆ. ಚಾಮರಾಜನಗರದ ಹಲವು ಕಡೆಗಳಲ್ಲಿ ವಾಲಿಬಾಲ್ ಆಟವಾಡುವ ಯುವಕರ ಗುಂಪುಗಳಿವೆ. ಇವರು ಆಟವಾಡುವಾಗ ಆಸಕ್ತಿಯಿಂದ ನೋಡುತ್ತಾ ನಿಲ್ಲುವ ಮಕ್ಕಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಾಲಿಬಾಲ್ ಸ್ಪರ್ಧೆಗಳು ನಡೆಯುತ್ತಿವೆ. ಈ ಕ್ರೀಡೆಯ ಮೇಲೆ ಇರುವ ಅಭಿಮಾನ ಜಿಲ್ಲಾ ಕ್ರೀಡಾ ವಸತಿನಿಲಯದ ಬಳಕೆಯ ಮೇಲೆ ಏಕೆ ಸಕಾರಾತ್ಮಕ ಪರಿಣಾಮ ಬೀರುತ್ತಿಲ್ಲ ಎನ್ನುವ ಪ್ರಶ್ನೆ ಕಾಡುತ್ತಿದೆ.
ದಾಖಲಾತಿ ಹೆಚ್ಚಳಕ್ಕೆ ಕಸರತ್ತು:
ಜಿಲ್ಲಾ ಕ್ರೀಡಾ ವಸತಿ ನಿಲಯದ ದಾಖಲಾತಿ ಹೆಚ್ಚಳ ಮಾಡುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಸರತ್ತು ನಡೆಯುತ್ತಿದೆ. ಶಿಕ್ಷಣ ಇಲಾಖೆಯ ಸಹಕಾರ ಪಡೆದು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಸರ್ಕಾರಿ ಶಾಲೆಗಳ 5ನೇ ತರಗತಿಯ ಮಕ್ಕಳ ದೈಹಿಕ ಸಾಮರ್ಥ್ಯ ಪರೀಕ್ಷಿಸಿ ಕ್ರೀಡಾ ವಸತಿ ನಿಲಯಕ್ಕೆ ಸೇರಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ. ಮಕ್ಕಳ ಪಾಲಕರ ವಾಟ್ಸ್‌ಆ್ಯಪ್ ಗ್ರೂಪ್ ರಚನೆ ಮಾಡಿ ಮಾಹಿತಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದೆಲ್ಲರದ ಪರಿಣಾಮ ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ವಸತಿ ನಿಲಯದಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗುವುದೆ ಅಥವಾ ಇಲ್ಲವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕೊರತೆಗೆ ಕಾರಣ ಹಲವು:
ಜಿಲ್ಲಾ ಕ್ರೀಡಾ ವಸತಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಲು ಹಲವು ಕಾರಣಗಳಿವೆ. ನಗರದಲ್ಲಿರುವ ವಸತಿ ನಿಲಯದಲ್ಲಿ ಮಕ್ಕಳನ್ನು ದಾಖಲಿಸಿ ಅಕ್ಕಪಕ್ಕದ ಸರ್ಕಾರಿ ಶಾಲೆಗೆ ಸೇರಿಸಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲೇ ಮಕ್ಕಳ ದಾಖಲಾತಿ ಕಡಿಮೆ ಇದೆ. ಇಲ್ಲಿಂದ ಅಲ್ಲಿಗೆ ಮಕ್ಕಳನ್ನು ಕಳುಹಿಸಿದರೆ ಹೆಚ್ಚುವರಿ ಶಿಕ್ಷಕರು ಶಾಲೆಗೆ ಹೊರೆ ಎನಿಸಿಕೊಳ್ಳಬೇಕಾಗುತ್ತದೆ. ಕ್ರೀಡಾ ವಸತಿ ನಿಲಯದ ಸೌಲಭ್ಯ ಪಡೆಯಲು ದೈಹಿಕವಾಗಿ ಸಾಮರ್ಥ್ಯ ಇರುವ ಮಕ್ಕಳು ಸಿಗುವುದು ಕಡಿಮೆಯಾಗುತ್ತಿದೆ. ಸಿಕ್ಕರೂ ಕೂಡ ಮಕ್ಕಳನ್ನು ಪಾಲಕರು ಹಾಸ್ಟೆಲ್‌ಗೆ ಸೇರಿಸಲು ಒಪ್ಪುತ್ತಿಲ್ಲ. ಮಕ್ಕಳಲ್ಲಿ ಕ್ರೀಡಾ ಪ್ರತಿಭೆ ಅಡಗಿದ್ದರೂ ಪಾಲಕರು ಕ್ರೀಡೆಗಿಂತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. 5ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯದ ಸೌಲಭ್ಯವಿದ್ದು, ಮುಂದಿನ ತರಗತಿಗೆ ವಸತಿ ನಿಲಯದ ಸೌಲಭ್ಯ ಪಡೆಯಲು ರಾಜ್ಯಮಟ್ಟದಲ್ಲಿ ಪ್ರತಿಭಾ ಪ್ರದರ್ಶನ ನೀಡಿ ಆಯ್ಕೆಯಾಗಬೇಕಾದ ಸವಾಲಿದೆ. ಈ ಕಾರಣಗಳಿಂದಾಗಿ ಹಾಸ್ಟೆಲ್‌ಗೆ ದಾಖಲಾತಿ ಕೊರತೆ ಕಾಡುತ್ತಿದೆ.
"

ಚಾಮರಾಜನಗರದ ಜಿಲ್ಲಾ ಕ್ರೀಡಾ ವಸತಿ ಶಾಲೆಗೆ ಪ್ರವೇಶ ಕೋರಿ ಈ ಸಲ 22 ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಿರುವವರೆಲ್ಲರೂ ಹಾಸ್ಟೆಲ್‌ಗೆ ದಾಖಲಾತಿ ಆಗುತ್ತಾರೋ ಇಲ್ಲವೋ ಗೊತ್ತಿಲ್ಲ. ವಾಲಿಬಾಲ್ ಕ್ರೀಡಾ ತರಬೇತಿಗೆ ನಿರಾಸಕ್ತಿ ಇದ್ದು, ಇದರ ಬದಲು ಅಥ್ಲೆಟಿಕ್ಸ್ ತರಬೇತಿ ಬಯಸುವ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯದ ಕೊಡಿಸಲು ಅವಕಾಶ ಕೊಡಬೇಕೆಂದು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದಿದ್ದೇವೆ.

— ಬಿಂದ್ಯಾ, ಪ್ರಭಾರ ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮರಾಜನಗರ


"

ಜಿಲ್ಲಾ ಕ್ರೀಡಾ ವಸತಿ ನಿಲಯದಲ್ಲಿ ುಟ್‌ಬಾಲ್ ಬಿಟ್ಟರೆ ಬೇರೆ ಕ್ರೀಡೆಗೆ ಮುಖ್ಯ ತರಬೇತುದಾರರು ಇಲ್ಲ. ವಸತಿ ನಿಲಯವೆಂದರೆ ಊಟ, ತಿಂಡಿ ಮಾತ್ರ ಕೊಡುವುದಷ್ಟೇ ಅಲ್ಲ. ಕ್ರೀಡೆಗೆ ತಕ್ಕ ಅಂಕಣವಿರಬೇಕು. ವೈಜ್ಞಾನಿಕವಾದ ಸಲಕರಣೆಗಳು ಇರಬೇಕು. ಇದ್ಯಾವುದೂ ಇಲ್ಲದೆ ಕೊರತೆಗಳೇ ತುಂಬಿರುವುದರಿಂದ ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಮಕ್ಕಳು ಸೇರುತ್ತಿಲ್ಲ.

— ವಿ.ಶ್ರೀನಿವಾಸ ಪ್ರಸಾದ್, ಹಿರಿಯ ಕ್ರೀಡಾಪಟು, ಚಾಮರಾಜನಗರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net