ಕ್ರೀಡೆ ಬೌದ್ಧಿಕ, ದೈಹಿಕ ಬೆಳವಣಿಗೆಗೆ ಸಹಕಾರಿ

ಗ್ರಾಮದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮೃತ್ಯುಂಜಯ ತಂಡಕ್ಕೆ ಬಿಜೆಪಿ ಹನೂರು ಮಂಡಲಾಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ ಬಹುಮಾನ ವಿತರಿಸಿದರು. ಕುಮಾರ್, ಮಲ್ಲೇಶ್, ಬಸವಣ್ಣ ಇತರರಿದ್ದರು.
ಗ್ರಾಮದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮೃತ್ಯುಂಜಯ ತಂಡಕ್ಕೆ ಬಿಜೆಪಿ ಹನೂರು ಮಂಡಲಾಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ ಬಹುಮಾನ ವಿತರಿಸಿದರು. ಕುಮಾರ್, ಮಲ್ಲೇಶ್, ಬಸವಣ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಹನೂರು ಮಂಡಲದ ಅಧ್ಯಕ್ಷ ಕಣ್ಣೂರು ಕೆ.ಪಿ. ವೃಷಭೇಂದ್ರಸ್ವಾಮಿ ಅಭಿಪ್ರಾಯ
  • ಬುದ್ಧ, ಬಸವ, ಅಂಬೇಡ್ಕರ್ ಕ್ರಿಕೆಟ್ ಪಂದ್ಯಾವಳಿ
ಹನೂರು: ಅಕ್ಷರಾಭ್ಯಾಸ ಮನಸ್ಸನ್ನು ಸದೃಢಗೊಳಿಸಿದರೆ ಕ್ರೀಡೆ ದೇಹವನ್ನು ಬಲಿಷ್ಠಗೊಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡಾ ಭಾವನೆಯನ್ನು ಹೊಂದಬೇಕು ಎಂದು ಬಿಜೆಪಿ ಹನೂರು ಮಂಡಲದ ಅಧ್ಯಕ್ಷ ಕಣ್ಣೂರು ಕೆ.ಪಿ ವೃಷಭೇಂದ್ರಸ್ವಾಮಿ ತಿಳಿಸಿದರು.
ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್- 2026 ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯಗಳಿಸಿದ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮನುಷ್ಯ ಒತ್ತಡಕ್ಕೆ ಒಳಗಾಗಿ ಆರೋಗ್ಯದ ಕಡೆ ಹೆಚ್ಚು ಗಮನ ನೀಡುತ್ತಿಲ್ಲ. ಇದರಿಂದ ಅನಾರೋಗ್ಯಕ್ಕೆ ಒಳಗಾಗಿ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಇದಕ್ಕೆ ಪೂರಕವಾಗಿ ಗ್ರಾಮದಲ್ಲಿ ಸಾಮರಸ್ಯದಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಕ್ರೀಡೆ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿ. ಉತ್ತಮ ಆರೋಗ್ಯವನ್ನು ಹೊಂದುವಂತೆ ಮಾಡುತ್ತದೆ. ಆದ್ದರಿಂದ ಯುವಕರು ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲದಿಂದ ಭಾಗವಹಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಸಮಾಜ ಸುಧಾರಕರು, ದಾರ್ಶನಿಕರು ಹಾಗೂ ಹಿರಿಯರ ಮಾರ್ಗದರ್ಶನವನ್ನು ಸ್ವೀಕರಿಸಿ ದೇಶದ ಸತ್ಪ್ರಜೆಯಾಗಿ ಸುಂದರ ಸಮ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು. ದೇಶದ ಏಕತೆ, ಸಮಗ್ರತೆಗಾಗಿ ಶ್ರಮಿಸಬೇಕು. ಇದರಿಂದ ಉತ್ತಮ ಸಮಾಜವನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.
ಮೃತ್ಯುಂಜಯ ತಂಡ ಪ್ರಥಮ: ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಣ್ಣೂರು ಬುಲ್ಸ್, ಭೀಮ್ ಬಾಯ್ಸ, ಜೈಭೀಮ್ ವಾರಿಯರ್ಸ್‌, ಮೃತ್ಯುಂಜಯ, ಯಂಗ್ ಟೈಗರ್ ಹಾಗೂ ಕಣ್ಣೂರು ಕ್ಯಾಪ್ಟನ್ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಮೃತ್ಯುಂಜಯ ತಂಡ 7 ಓವರ್‌ಗಳಲ್ಲಿ 57 ರನ್ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಜೈಭೀಮ್ ವಾರಿಯರ್ಸ್‌ ತಂಡ 56ರನ್ ಗಳಿಸಿ ದ್ವಿತೀಯ ಸ್ಥಾನ ಪಡೆಯಿತು. ಪಂದ್ಯ ಶ್ರೇಷ್ಠ ಅರವಿಂದ್ ಪಡೆದರೆ, ಸರಣಿ ಶ್ರೇಷ್ಠ ರೇವಂತ್ ಪಡೆದರು. ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಕಿರಣ್ ಹೊರಹೊಮ್ಮಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಾಂತರಾಜು, ಬಸವಣ್ಣ, ಶಿಕ್ಷಕ ಕುಮಾರ್, ಮುಖಂಡರಾದ ಮಲ್ಲೇಶ್, ರಾಜಪ್ಪ, ದಿವಾನ್ ಕುಮಾರ್, ಮಹೇಶ್, ಆನಂದ್, ಪುನೀತ್, ಮಲ್ಲರಾಜು, ಚಿನ್ನು, ಶಿವರಾಜ್ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net