ಎರಡು ಚಿನ್ನದ ಪದಕ ಗೆದ್ದ ಸೌಮ್ಯಾಗೆ ಅದ್ದೂರಿ ಸ್ವಾಗತ

 ರಾಮಾಪುರಕ್ಕೆ ಆಗಮಿಸಿದ ಸೌಮ್ಯಾಳಿಗೆ ಹೂವಿನ ಸುರಿಮಳೆಗೈಯ್ಯುವುದರ ಮೂಲಕ ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.
ರಾಮಾಪುರಕ್ಕೆ ಆಗಮಿಸಿದ ಸೌಮ್ಯಾಳಿಗೆ ಹೂವಿನ ಸುರಿಮಳೆಗೈಯ್ಯುವುದರ ಮೂಲಕ ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ಯಾರಾಗೇಮ್ಸ್‌ನಲ್ಲಿ ಸಾಧನೆ ಮಾಡಿದ ಸಾಧಕಿಗೆ ಅಭಿನಂದನೆ
  • ರಾಮಾಪುರ ಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮ
ಹನೂರು: ದುಬೈನಲ್ಲಿ ಇತ್ತೀಚಿಗೆ ನಡೆದ ಏಷಿಯನ್ ಪ್ಯಾರಾಗೇಮ್ಸ್‌ನಲ್ಲಿ 2 ಚಿನ್ನದ ಪದಕ ಗಳಿಸಿ ತಾಲೂಕಿನ ಸ್ವಗ್ರಾಮ ರಾಮಾಪುರಕ್ಕೆ ಗುರುವಾರ ಆಗಮಿಸಿದ ವಿದ್ಯಾರ್ಥಿನಿ ಸೌಮ್ಯಾ ಅವರಿಗೆ ಗ್ರಾಮಸ್ಥರು, ಶಿಕ್ಷಕ ವರ್ಗ, ತಾಲೂಕಿನ ಜನತೆ, ವಿವಿಧ ಸಂಘ, ಸಂಸ್ಥೆಗಳಿಂದ ಅಭಿನಂದನಾ ಮಹಾಪೂರವೇ ಹರಿದು ಬಂತು.
ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಜ್ಜಲನತ್ತ ಗ್ರಾಮದ ಸೌಮ್ಯಾ ಅವರು ಬಾಲ್ಯದಲ್ಲಿಯೇ ಪಾಲಕರನ್ನು ಕಳೆದುಕೊಂಡಿದ್ದಾರೆ. ಕಣ್ಣಿನ ದೋಷದಿಂದ ಅಂಗವಿಲಕರಾಗಿರುವ ಈಕೆ 2ನೇ ತರಗತಿವರೆಗೂ ರಾಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದರು. ಬಳಿಕ ಗ್ರಾಮದ ಶಿಕ್ಷಕಿ ರೂಪಾಶ್ರೀ ಅವರು ಈಕೆಯನ್ನು ಚಾ.ನಗರದ ದೀಪಾ ಅಕಾಡೆಮಿಗೆ ಸೇರಿಸಿದ್ದರು. ಇಲ್ಲಿ 7ನೇ ತರಗತಿವರೆಗೂ ಶಿಕ್ಷಣ ಪಡೆದು ಬಳಿಕ ಬೆಂಗಳೂರಿನ ಇದೇ ಸಂಸ್ಥೆಗೆ ಸೇರಿಸಿ 10ನೇ ತರಗತಿ ಶಿಕ್ಷಣ ಪೂರೈಸಿದರು. ಪ್ರಸ್ತುತ ಬೆಂಗಳೂರಿನ ಶ್ರೀಗಂಧ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಶಿಕ್ಷಣ ಪಡೆಯುತ್ತಿರುವ ಈಕೆ ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ ವಿಜಯ ಸಾಧಿಸಿದ್ದರು. ಈಕೆಯ ಸಾಧನೆಯನ್ನು ಮನಗಂಡು ಸಮಾಜ ಸೇವಕ ಕೃಷ್ಣಮೂರ್ತಿ ಅವರು ದುಬೈನಲ್ಲಿ ನಡೆದ ಏಷಿಯನ್ ಪ್ಯಾರಾಗೇಮ್ಸ್‌ನಲ್ಲಿ ಭಾಗಿಯಾಗುವಂತೆ ಅವಕಾಶ ಕಲ್ಪಿಸಿದ್ದರು. ಇಲ್ಲಿ ನಡೆದ ಗೇಮ್ಸ್‌ನಲ್ಲಿ 400 ಮೀ ಹಾಗೂ 1,500 ಮೀಟರ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವುದರ ಮೂಲಕ ವಿಜಯ ಸಾಧಿಸಿ 2 ಚಿನ್ನದ ಪದಕ ಗಳಿಸಿದ್ದರು. ಗುರುವಾರ ರಾಮಾಪುರ ಗ್ರಾಮದಲ್ಲಿ ವನ್ನಿಕುಲ ಕ್ಷತ್ರಿಯ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಈಕೆಯ ಸಾಧನೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು.
ಹೂವಿನ ಸುರಿಮಳೆ: ಗ್ರಾಮಕ್ಕೆ ಆಗಮಿಸಿದ ಸೌಮ್ಯಾ ಅವರನ್ನು ಪೊಲೀಸ್ ಠಾಣೆ ರಸ್ತೆ ಮುಂಭಾಗದಿಂದ ಕಾರಿನಲ್ಲಿ ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ಶ್ರೀ ಮಹದೇಶ್ವರ ದೇಗುಲದ ಆವರಣಕ್ಕೆ ಕರೆ ತರಲಾಯಿತು. ಈ ವೇಳೆ ಕ್ರೀಡಾಭಿಮಾನಿಗಳು, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹೂವಿನ ಸುರಿಮಳೆಗರೆಯುವ ಮೂಲಕ ಬರಮಾಡಿಕೊಂಡರು. ಈಕೆಯ ಸಾಧನೆಗೆ ಬಹುತೇಕರು ಹೂವಿನ ಹಾರ ಹಾಕಿ, ಶಾಲೂ ಹೊದಿಸಿ ಸನ್ಮಾನಿಸುವುದರ ಜತೆಗೆ ಕೆಲವರು ವೈಯಕ್ತಿಯವಾಗಿ ಧನಸಹಾಯ ನೀಡಿ ಮುಂದಿನ ಕ್ರೀಡೆಗೆ ಉತ್ತೇಜನ ನೀಡಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಪಾಲಕರು ಕಳೆದುಕೊಂಡು ಕಷ್ಟವನ್ನು ಅನುಭವಿಸಿದರೂ ಛಲ ಬಿಡದ ಸೌಮ್ಯಾ ಅವರು ಪ್ಯಾರಾಗೇಮ್ಸ್‌ನಲ್ಲಿ 2 ಚಿನ್ನದ ಪದಕ ಗಳಿಸುವುದರ ಮೂಲಕ ಕೀರ್ತಿ ತಂದು ಕೊಟ್ಟಿರುವುದು ಹೆಮ್ಮೆಯ ವಿಷಯ. ಈಕೆಯ ಸಾಧನೆಗೆ ಹಾಗೂ ಉನ್ನತ ಶಿಕ್ಷಣಕ್ಕೆ ಸಂಪೂರ್ಣ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಪ್ಯಾರಾಗೇಮ್ಸ್‌ನಲ್ಲಿ ಸೌಮ್ಯಾ 2 ಚಿನ್ನದ ಪದಕ ಗಳಿಸುವುದರ ಮೂಲಕ ದೇಶಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಆದರೆ ಜನಪ್ರನಿಧಿಗಳು ಹಾಗೂ ಜಿಲ್ಲಾಡಳಿತ ಈಕೆಯ ಸಾಧನೆಯನ್ನು ಪುರಸ್ಕರಿಸಲು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಈಕೆಯ ಸಾಧನೆಗೆ ಪ್ರೋತ್ಸಾಹ ಅಗತ್ಯವಾಗಿದೆ. ಆದ್ದರಿಂದ ಜಿಲ್ಲಾಡಳಿತ ಸೌಮ್ಯಾಗೆ ಪ್ರೇರಣೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾಧಕಿ ಸೌಮ್ಯಾ ಮಾತನಾಡಿ, ಪಾಲಕರು ಕಳೆದುಕೊಂಡಿದ್ದರೂ ನನಗೆ ಶಿಕ್ಷಣ ಕೊಡಿಸಿ ಪ್ರತಿಭೆಯನ್ನು ಗುರ್ತಿಸಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ 2 ಚಿನ್ನದ ಗಳಿಸಲು ಕಾರಣರಾದ ಎಲ್ಲರಿಗೂ ಋಣಿಯಾಗಿರುತ್ತೇನೆ. ಮುಂಬರುವ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲೂ ಚಿನ್ನದ ಪದಕವನ್ನು ತಂದು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಸಮಾಜ ಸೇವಕ ಕೃಷ್ಣಮೂರ್ತಿ, ವನ್ನಿಕುಲ ಕ್ಷತ್ರಿಯ ಸಂಘದ ಜಿಲ್ಲಾಧ್ಯಕ್ಷ ಮಣಿ, ಶಿಕ್ಷಕಿ ರೂಪಾಶ್ರೀ, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಶಾಹುಲ್ ಆಹಮದ್, ಗೌತಮ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವೀಂದ್ರ, ಜಿಪಂ ಮಾಜಿ ಸದಸ್ಯರಾದ ಬಸವರಾಜು, ಈಶ್ವರ್, ಮುಖಂಡರಾದ ವೀರಪ್ಪ, ಶಿವಪ್ಪ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net