ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಸ್ಥಾಪಿಸಿರುವ ಒಂದು ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದ ಕಾರ್ಯಾರಂಭಕ್ಕೆ ಶನಿವಾರ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.
ಈ ವೇಳೆ ಶಾಸಕರು ಮಾತನಾಡಿ, ಮ.ಬೆಟ್ಟಕ್ಕೆ ಸೆಸ್ಕ್ ಇಲಾಖೆಯ ವತಿಯಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ಆಗ್ಗಾಗ್ಗೆ ವಿದ್ಯುತ್ ಸಮಸ್ಯೆ ತಲೆದೂರುತ್ತಿತ್ತು. ಇದರಿಂದ ಸಮಸ್ಯೆಯಾಗಿ ಪರಿಣಮಿಸಿತ್ತು. ಹಾಗಾಗಿ ಶ್ರೀಕ್ಷೇತ್ರಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ ಅಗತ್ಯವಾಗಿತ್ತು. ಈ ದೆಸೆಯಲ್ಲಿ ಪ್ರಾಧಿಕಾರದಿಂದ 8.51 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಘಟಕವನ್ನು ಸ್ಥಾಪಿಸಿಲಾಗಿದ್ದು, ಕಾರ್ಯಾರಂಭಕ್ಕೆ ಇದೀಗ ಚಾಲನೆ ನೀಡಲಾಗುತ್ತಿದೆ. ಶ್ರೀಕ್ಷೇತ್ರಕ್ಕೆ ನಿರಂತರ ವಿದ್ಯುತ್ ಪೂರೈಕೆಯಾಗುವುದರಿಂದ ತಲೆದೂರುತ್ತಿದ್ದ ಸಮಸ್ಯೆ ಮುಕ್ತಿ ಹೊಂದಂತಾಗಿದೆ ಎಂದು ತಿಳಿಸಿದರು.
ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾಗಿರುವ ವಜ್ರಮಲೆ ಭವನಕ್ಕೆ ತೆರಳಿದ ಶಾಸಕರು ಅಳವಡಿಸಲಾಗುತ್ತಿರುವ ಅಗತ್ಯ ಪೀಠೋಪಕರಣಗಳನ್ನು ಪರಿಶೀಲನೆ ನಡೆಸಿದರು. ಗುಣಮಟ್ಟ ಕಾಯ್ದುಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದರು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆಯಲು ನಿರ್ಮಿಸುತ್ತಿರುವ ಕ್ಯೂಲೈನ್ ಕಾಮಗಾರಿಯ ಸ್ಥಳಕ್ಕೆ ತೆರಳಿ ಡಿಸೈನ್ ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸುವಂತೆ ಪಿಡಬ್ಲ್ಯುಡಿ ಎಇಇ ಚಿನ್ನಣ್ಣ ಅವರಿಗೆ ಸೂಚಿಸಿದರು.
ಸುಸಜ್ಜಿತ ದಾಸೋಹ ಭವನಕ್ಕೆ ಅಗತ್ಯ ಕ್ರಮವಹಿಸಿ: ಬಳಿಕ ಶಾಸಕರು ಮಾಸ್ಟರ್ ಪ್ಲಾೃನ್ ಆವರಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾಗಮಲೆ ಭವನದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸುಸಜ್ಜಿತವಾಗಿ ದಾಸೋಹ ಭವನ ನಿರ್ಮಿಸಲು ಉದ್ಧೇಶಿಸಲಾಗಿದೆ. ಪ್ರಕ್ರಿಯೆ ಟೆಂಡರ್‌ನಲ್ಲಿದೆ. ಆದ್ದರಿಂದ ಈ ಬಗ್ಗೆ ಮುತುರ್ವಜಿ ವಹಿಸಿ ದಾಸೋಹ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಬೇಕು. ಆಗಮಿಸುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಶ್ರೀಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಬೇಕು. ಮಾಸ್ಟರ್ ಪ್ಲಾನ್ ಆವರಣವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು. 5ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಪಿಡಬ್ಲ್ಯುಡಿ ಎಇ ಸಂತೋಷ್, ಪ್ರಾಧಿಕಾರದ ಇಂಜಿನಿಯರ್ ಸೆಲ್ವ ಗಣಪತಿ, ಮುಖಂಡರಾದ ವಿಜಯಕುಮಾರ್, ಗೋವಿಂದ, ಚಿನ್ನವೆಂಕಟ, ಮಹದೇವ ಹಾಗೂ ಇನ್ನಿತರರು ಇದ್ದರು.