ಜಗತ್ತಿನಾದ್ಯಂತ ಕೌಶಲ್ಯಯುಕ್ತ ನರ್ಸ್‌ಗಳ ಅಗತ್ಯವಿದೆ

ಚಾಮರಾಜನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶ್ರೀಕಾಂತ್ ಫುಲಾರಿ, ಡಾ.ಚಿನ್ನಬೋವಿ, ಆರ್.ಮಹೇಶ್, ಚಂದ್ರಕಲಾ ವಿ.ಶೇಷಾದ್ರಿ, ವಿನಯ್ ಕುಮಾರ್ ಇದ್ದರು.
ಚಾಮರಾಜನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶ್ರೀಕಾಂತ್ ಫುಲಾರಿ, ಡಾ.ಚಿನ್ನಬೋವಿ, ಆರ್.ಮಹೇಶ್, ಚಂದ್ರಕಲಾ ವಿ.ಶೇಷಾದ್ರಿ, ವಿನಯ್ ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲಾರಿ ಹೇಳಿಕೆ
  • ನರ್ಸಿಂಗ್ ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಚಾಮರಾಜನಗರ: ಜಗತ್ತನಲ್ಲೇ ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದ ಕೆಲಸವಾಗಿದ್ದು, ಕೌಶಲ್ಯಯುಕ್ತ ನರ್ಸ್‌ಗಳ ಅಗತ್ಯ ಹೆಚ್ಚಾಗಿದೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಫುಲಾರಿ ಹೇಳಿದರು.‘
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿಸಿದರು.
ರಾಜ್ಯದಲ್ಲಿರುವ 680 ಬಿಎಸ್ಸಿ ನರ್ಸಿಂಗ್ ಕಾಲೇಜುಗಳಲ್ಲಿ 40 ಸಾವಿರ ವಿದ್ಯಾರ್ಥಿಗಳು ಹಾಗೂ 800 ಡಿಪ್ಲೋಮೋ ಇನ್ ನರ್ಸಿಂಗ್ ಕಾಲೇಜುಗಳಲ್ಲಿ 40 ಸಾವಿರ ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಪ್ರತಿವರ್ಷ 70-80 ವಿದ್ಯಾರ್ಥಿಗಳು ನರ್ಸಿಂಗ್ ಪೂರ್ಣಗೊಳಿಸುತ್ತಿದ್ದಾರೆ. ಅದಾಗ್ಯೂ ಜರ್ಮನ್, ಇಟಲಿ, ಫ್ರಾನ್ಸ್ ಹಾಗೂ ಇನ್ನತರೆ ದೇಶಗಳಲ್ಲಿ ನಮ್ಮ ರಾಜ್ಯದ ನರ್ಸ್‌ಗಳಿಗೆ ಬೇಡಿಕೆ ಇದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ನರ್ಸಿಂಗ್ ತರಬೇತಿ ಪಡೆದವರನ್ನು ಹೊರದೇಶಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಮೂಲಕ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಪಾಲಕರು ಕೂಡ ತಮ್ಮ ವಿದ್ಯಾರ್ಥಿಗಳು ನರ್ಸಿಂಗ್ ವ್ಯಾಸಂಗಕ್ಕೆ ಬಂದಾಗಲೇ ಉದ್ಯೋಗಕ್ಕೆ ಸೇರಿದ್ದಾಳೆ ಎಂದು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳಬೇಕು ಎಂದು ಹೇಳಿದರು.
ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆದುಕೊಂಡರೇ, ಉದ್ಯೋಗ ಸುಲಭವಾಗಿ ದೊರೆಯುತ್ತದೆ. ಈ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್‌ನಂತಹ ಅವಕಾಶಗಳು ಇರುವುದರಿಂದ ತುಂಬಾ ಸಹಕಾರಿಯಾಗಲಿದೆ. ಬಿಎಸ್ಸಿ ನರ್ಸಿಂಗ್ ನಂತರವೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬಹುದಾಗಿದ್ದು, ಕೌಶಲ್ಯಯುಕ್ತ ತರಬೇತಿಗೆ ವಿದ್ಯಾರ್ಥಿಗಳು ಒತ್ತುನೀಡಿ ಎಂದರು.
ಸಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಚಿನ್ನಬೋವಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನರ್ಸಿಂಗ್ ವಿಧ್ಯಾಭ್ಯಾಸ ಹೊಸ ಅನುಭವವನ್ನು ಉಂಟು ಮಾಡುತ್ತದೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ನರ್ಸಿಂಗ್ ಹುದ್ದೆಗೆ ಅಪಾರವಾದ ಅವಕಾಶಗಳು ಇದೆ. ಸೇವೆ, ಕರುಣೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದರೇ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಎಂದರು.
ಈ ಸಂದರ್ಭದಲ್ಲಿ 2020-24 ನೇ ಸಾಲಿನಲ್ಲಿ ಉನ್ನತ ಅಂಕ ಗಳಿಸಿದ ಹಾಗೂ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ಜೆಎಸ್‌ಎಸ್ ಮಹಾವಿದ್ಯಾ ಪೀಠ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಸಿಮ್ಸ್ ಆಸ್ಪತ್ರೆ ಪ್ರಭಾರ ಶುಶ್ರೂಷಕ ಅಧೀಕ್ಷಕರಾದ ಚಂದ್ರಕಲಾ ವಿ.ಶೇಷಾದ್ರಿ, ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ವಿನಯ್ ಕುಮಾರ್ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net