ಪಶು ಚಿಕಿತ್ಸೆಗೆ ವೈದ್ಯರ ಕೊರತೆ

 ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಪಶು ವೈದ್ಯರಿಲ್ಲದ ಕಾರಣಕ್ಕೆ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಜಡಿದಿದ್ದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಪಶು ವೈದ್ಯರಿಲ್ಲದ ಕಾರಣಕ್ಕೆ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಜಡಿದಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಮಂಜೂರಾದ 3101 ಹುದ್ದೆಗಳಲ್ಲಿ 1081 ಖಾಲಿ
  • ಇಲಾಖೆ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಆಸ್ಪತ್ರೆಗೆ ಬೀಗ ಜಡಿದಿದ್ದ ಗ್ರಾಮಸ್ಥರು
ಚಾಮರಾಜನಗರ: ಕೃಷಿಯ ಉಪ ಕಸುಬಾಗಿ ರೈತರ ಆರ್ಥಿಕ ಸಬಲತೆಗೆ ಕಾರಣವಾಗಿರುವ ಪಶು ಪಾಲನೆಗೆ ವೈದ್ಯರ ಕೊರತೆ ಕಾಡುತ್ತಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಸ್ಪತ್ರೆಗಳಿಗೆ ಒಟ್ಟು 3101 ಪಶು ವೈದ್ಯರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 1653 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 367 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತುಂಬಲಾಗಿದ್ದು, ಉಳಿದ 1081 ಹುದ್ದೆಗಳು ಖಾಲಿ ಇವೆ.
ಇಷ್ಟು ಪ್ರಮಾಣದ ಪಶು ವೈದ್ಯರ ಕೊರತೆಯ ನಡುವೆಯೂ ರಾಜ್ಯದಲ್ಲಿ 2025-26ನೇ ಸಾಲಿನ ಜನವರಿವರೆಗೆ ಪ್ರತಿ ದಿನದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ವಾರ್ಷಿಕವಾಗಿ 994.74 ಕೋಟಿ ಮೊಟ್ಟೆ ಮತ್ತು 4,51,660 ಟನ್ ಮಾಂಸ ಉತ್ಪಾದನೆಯಾಗುತ್ತಿದೆ. ಕೃಷಿ ಸವಾಲುಗಳ ನಡುವೆ ಪಶು ಸಾಕಾಣೆ ರೈತರ ಕೈ ಹಿಡಿದಿದೆ ಎನ್ನುವುದಕ್ಕೆ ಈ ಗಣನೀಯ ಪ್ರಮಾಣದ ಉತ್ಪಾದನೆಯೇ ಉದಾಹರಣೆ. ವೈದ್ಯರ ಕೊರತೆ ನಿವಾರಣೆಯಾದರೆ ಪಶು ಪಾಲನೆ ರೈತರ ಆರ್ಥಿಕ ಪ್ರಗತಿಯಲ್ಲಿ ಕ್ರಾಂತಿ ಮಾಡುವುದರಲ್ಲಿ ಅನುಮಾನವಿಲ್ಲ.
ಆಸ್ಪತ್ರೆಗೆ ಬೀಗ ಜಡಿದಿದ್ದ ಗ್ರಾಮಸ್ಥರು:
ರಾಜ್ಯದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದ ಒಟ್ಟು 825 ಪಶು ವೈದ್ಯಕೀಯ ಸಂಸ್ಥೆಗಳಿವೆ. ಖಾಲಿ ಇರುವ ಪಶು ವೈದ್ಯಕೀಯ ಸಂಸ್ಥೆಗಳಿಗೆ ಪಶು ವೈದ್ಯರನ್ನು ಪ್ರಭಾರದಲ್ಲಿರಿಸಿ ಜಾನುವಾರುಗಳಿಗೆ ವ್ಯತ್ಯಯವಾಗದಂತೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳುತ್ತದೆ. ಆದರೆ ಸಚಿವರು ಉಸ್ತುವಾರಿ ವಹಿಸಿಕೊಂಡಿರುವ ಚಾ.ನಗರ ಜಿಲ್ಲೆಯ ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲವೆಂದು ಆಕ್ರೋಶಗೊಂಡಿದ್ದ ಲೊಕ್ಕನಹಳ್ಳಿ ಗ್ರಾಮದವರು ಮಾ.25ರಂದು ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಮಳೆಯಾಶ್ರಿತ ಮತ್ತು ಬೆಟ್ಟ, ಗುಡ್ಡಗಾಡಾಗಿರುವ ಹನೂರು ತಾಲೂಕಿನಲ್ಲಿ ಪಶು ಪಾಲನೆ ಪ್ರಧಾನವಾಗಿದೆ. ಆದರೆ ಇಲ್ಲಿನ 3 ಪಶು ಆಸ್ಪತ್ರೆ, 7 ಪಶು ಚಿಕಿತ್ಸಾಲಯ, 2 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿಗೆ ಇರುವವರು ಒಬ್ಬರೇ ವೈದ್ಯ.
ಅಸಹಾಯಕ ಪರಿಸ್ಥಿತಿ:
ಹಸು, ದನ, ಕರು,ಕುರಿ, ಕೋಳಿ ಇನ್ನಿತರೆ ಸಾಕುಪ್ರಾಣಿಳಿಗೆ ಚಿಕಿತ್ಸೆ ನೀಡುವುದರೊಂದಿಗೆ ಪಶು ಪಾಲನೆಗೆ ಸಂಬಂಧಿಸಿದ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವ ಹೊಣೆಗಾರಿಕೆ ಪಶು ವೈದ್ಯರ ಮೇಲಿದೆ. ಇದರ ನಡುವೆ ಪ್ರಭಾರದ ಜವಾಬ್ದಾರಿ ಹೊರುವುದು ಕಾರ್ಯಭಾರದ ಒತ್ತಡದೊಂದಿಗೆ ಅಸಹಾಯಕ ಪರಿಸ್ಥಿತಿಗೆ ತಂದು ನಿಲ್ಲಿಸುತ್ತಿದೆ. ಊರಿನ ಯಾವುದೋ ಮೂಲೆಯಲ್ಲಿ ಹಸು ಸತ್ತು ಬಿದ್ದರೆ ಅದರ ಮರಣೋತ್ತರ ಪರೀಕ್ಷೆ ನಡೆಸಲು ಅಲ್ಲಿಗೆ ಹೋಗಬೇಕು. ಅದೇ ಸಂದರ್ಭದಲ್ಲಿ ಮತ್ತೊಂದು ಕಡೆ ದನಗಳಿಗೆ ಕಾಯಿಲೆ ಬಂದಿದ್ದರೆ ಚಿಕಿತ್ಸೆ ಕೊಡಲು ಓಡೋಡಿ ಬರಬೇಕಾಗಿದೆ. ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲವೆಂದು ರೈತರು ವ್ಯಕ್ತಪಡಿಸುವ ಆಕ್ರೋಶದ ಮುಂದೆ ವೈದ್ಯರು ಅಸಹಾಯಕರಾಗಿ ನಿಲ್ಲಬೇಕಾಗುತ್ತಿದೆ.
"

ರಾಜ್ಯದಲ್ಲಿ 400 ಪಶು ವೈದ್ಯಾಧಿಕಾರಿಗಳನ್ನು ಖಾಯಂ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗುತ್ತಿಗೆ ಆಧಾರದಲ್ಲಿ ಈಗಾಗಲೇ 367 ಪಶು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿಯಾಗಿ 400 ಪಶು ವೈದ್ಯದ್ಯಾಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಯು ಆರ್ಥಿಕ ಇಲಾಖೆ ಹಂತದಲ್ಲಿ ಪರಿಶೀಲನೆಯಲ್ಲಿದೆ.— ಕೆ.ವೆಂಕಟೇಶ್, ಪಶು ಸಂಗೋಪನಾ ಸಚಿವ

"

ರಾಜ್ಯದಲ್ಲಿ ಕಾಡುತ್ತಿರುವ ಪಶು ವೈದ್ಯರ ಕೊರತೆಯನ್ನು ಸರ್ಕಾರದಿಂದ ಶೀಘ್ರದಲ್ಲಿ ಸರಿಪಡಿಸದೆ ಇದ್ದರೆ ಪಶು ಸಂಗೋಪನಾ ಸಚಿವರ ಉಸ್ತುವಾರಿ ಜಿಲ್ಲೆಯಾದ ಚಾ.ನಗರ ಜಿಲ್ಲೆಯಲ್ಲಿ ವೈದ್ಯರಿಲ್ಲದ ಆಸ್ಪತ್ರೆಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ.

— ಹಳ್ಳಿಕೆರೆಹುಂಡಿ ಭಾಗ್ಯರಾಜ್, ರೈತ ಮುಖಂಡ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net