ಹನೂರು: ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಬಗೆರೆ ಗ್ರಾಮದಲ್ಲಿ ಸೋಮವಾರ ಯೂರಿಯಾ ಮಿಶ್ರಿತ ನೀರು ಕುಡಿದು 7 ಕುರಿಗಳು ಮೃತಪಟ್ಟಿವೆ.
ಡಿ ವಿಲೇಜ್ ಗ್ರಾಮದ ಮುತ್ತುರಾಜು ಅವರು 50 ಕುರಿಗಳನ್ನು ಅರಬಗೆರೆ ಗ್ರಾಮದ ಕುರಿಗಾಹಿಯೊಬ್ಬರಿಗೆ ಮೇಯಿಸಲು ಕೊಟ್ಟಿದ್ದರು. ಬೆಳಗ್ಗೆ ಎಂದಿನಂತೆ ಕುರಿಗಾಯಿ ಕುರಿಗಳನ್ನು ಮೇಯಿಸಲು ಕರೆದೊಯ್ದಿದ್ದರು. ಈ ವೇಳೆ ಅರಬಗೆರೆ ಗ್ರಾಮದ ಬೂದಿಕೆರೆಯಲ್ಲಿ ನೀರು ಕುಡಿದ 7 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಸುದ್ದಿ ತಿಳಿದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಈ ವೇಳೆ ಕೆರೆಯ ನೀರಿಗೆ ಕಿಡಿಗೇಡಿಗಳು ಯೂರಿಯಾ ಮಿಶ್ರಣ ಮಾಡಿರುವ ಪರಿಣಾಮ ಕುರಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ನಿತ್ರಾಣಗೊಂಡಿರುವ 2 ಕುರಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ.
ಈ ಸಂಬಂಧ ವಿಜಯವಾಣಿಯೊಂದಿಗೆ ಮಾತನಾಡಿದ ಡಾ.ಸಿದ್ದರಾಜು, ವಿಷಪೂರಿತ ನೀರು ಕುಡಿದಿರುವ ಪರಿಣಾಮ ಕುರಿಗಳು ಮೃತಪಟ್ಟಿದ್ದು, ಇಲಾಖೆ ವತಿಯಿಂದ ತಲಾ 7 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.