ಹನೂರು: ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಬುಧವಾರ ಸುರಿದ ಗಾಳಿ ಸಹಿತ ಜೋರು ಮಳೆಗೆ ಚರಂಡಿಯ ಕೊಳಚೆ ನೀರು ರಸ್ತೆಯಲ್ಲಿ ಹರಿದಿದ್ದು, ಬಸ್ ನಿಲ್ದಾಣದ ವೃತ್ತದಲ್ಲಿ ತ್ಯಾಜ್ಯ ಹರಡಿಕೊಂಡಿದೆ. ಈ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿನ ಚರಂಡಿಯಲ್ಲಿ ಗ್ರಾಪಂ ಆಡಳಿತ ತ್ಯಾಜ್ಯ ತೆರೆವುಗೊಳಿಸದ ಪರಿಣಾಮ ಕೊಳಚೆ ನೀರು ಹರಿಯಲು ಸಾಧ್ಯವಾಗದೆ ನಿಂತಲ್ಲೇ ನಿಂತಿತ್ತು. ಜತೆಗೆ ತ್ಯಾಜ್ಯ ಸಂಗ್ರಹವಾಗಿತ್ತು. ಚರಂಡಿ ಹೂಳನ್ನು ತೆರೆವುಗೊಳಿಸುವಂತೆ ಗ್ರಾಮಸ್ಥರು ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮವಹಿಸಿರಲಿಲ್ಲ. ಪರಿಣಾಮ ಗ್ರಾಮದಲ್ಲಿ ಬುಧವಾರ ಸಂಜೆ ಸುಮಾರು 20 ನಿಮಿಷಗಳವರೆಗೆ ಸುರಿದ ಗಾಳಿ ಸಹಿತ ಜೋರು ಮಳೆಗೆ ಕೊಳಚೆ ನೀರು ರಸ್ತೆಯಲ್ಲಿ ಹರಿದು ತ್ಯಾಜ್ಯ ವೃತ್ತದಲ್ಲಿ ಹರಡಿಕೊಂಡಿತು. ಇದರಿಂದ ಅಶುಚಿತ್ವ ನಿರ್ಮಾಣವಾಗಿದ್ದು,
ಸಾರ್ವಜನಿಕರು ಸಂಚರಿಸಲು ಕಿರಿಕಿರಿ ಅನುಭವಿಸಿದರು. ಚರಂಡಿ ಹೂಳು ತೆಗೆಸಲು ನಿರ್ಲಕ್ಷ್ಯ ವಹಿಸಿರುವ ಗ್ರಾಪಂ ಆಡಳಿತದ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಚರಂಡಿಯಲ್ಲಿನ ತ್ಯಾಜ್ಯ ತೆರೆವಿಗೆ ಹಾಗೂ ಗ್ರಾಮದಲ್ಲಿ ಶುಚಿತ್ವ ಕಾಪಾಡುವಂತೆ ಗ್ರಾಮದ ನೂರುಲ್ಲಾ ಒತ್ತಾಯಿಸಿದ್ದಾರೆ.