ಕರ್ನಾಟಕ ಪಬ್ಲಿಕ್ ಶಾಲೆಗೆ ವಿದ್ಯಾರ್ಥಿಗಳ ಆಯ್ಕೆ

ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಶುಕ್ರವಾರ ಆಯ್ಕೆ ಮಾಡಲಾಯಿತು.
ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಲಾಟರಿ ಎತ್ತುವ ಮೂಲಕ ಶುಕ್ರವಾರ ಆಯ್ಕೆ ಮಾಡಲಾಯಿತು.
Published on
ಯಳಂದೂರು: ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು ಪೋಷಕರಿಂದ ಹೆಚ್ಚು ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ಲಾಟರಿ ಎತ್ತುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆ ಸಭಾಂಗಣದಲ್ಲಿ ಶುಕ್ರವಾರ ಆಯ್ಕೆ ಮಾಡಲಾಯಿತು.

ಪ್ರತಿ ವರ್ಷವೂ ಈ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರಿಂದ ಹೆಚ್ಚು ಬೇಡಿಕೆ ಇರುತ್ತದೆ. ಈ ಬಾರಿಯೂ ಕೂಡ 67 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಕೇವಲ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಅವಕಾಶವಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಮಕ್ಕಳು ಪೋಷಕರು, ಅತಿಥಿಗಳಿಂದ ಲಾಟರಿ ಎತ್ತುವ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲೆ ಉಪಪ್ರಾಂಶುಪಾಲ ನಂಜುಂಡಯ್ಯ ಮಾತನಾಡಿ, ನಮ್ಮಲ್ಲಿ ಕೆಪಿಎಸ್ ಶಾಲೆ ಆರಂಭವಾದ ವರ್ಷದಿಂದಲೂ ಕೂಡ ಪೋಷಕರಿಂದ ಮಕ್ಕಳನ್ನು ಸೇರಿಸಿಕೊಳ್ಳಲು ಹೆಚ್ಚು ಬೇಡಿಕೆ ಬರುತ್ತದೆ. ಸರ್ಕಾರಿ ನಿಯಮದಂತೆ ಇಂತಹ ಸಂದರ್ಭದಲ್ಲಿ ಲಾಟರಿ ಎತ್ತುವ ಮೂಲಕ ಮಕ್ಕಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿ 40 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ 10 ಮಕ್ಕಳ ಹೆಸರನ್ನೂ ಲಾಟರಿ ಮೂಲಕ ಎತ್ತಿ ಇವರ ಹೆಸರನ್ನು ಕಾಯ್ದಿರಿಸಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ಆಯ್ಕೆಗೊಂಡ ಮಕ್ಕಳಲ್ಲಿ ವಯಸ್ಸು ಸೇರಿದಂತೆ ಇತರೆ ದಾಖಲಾತಿ ವ್ಯತ್ಯಾಸವಾದಲ್ಲಿ ಕಾಯ್ದಿರಿಸಿದ ವಿದ್ಯಾರ್ಥಿಗಳಿಗೆ ಅವಕಾಶ ಲಭಿಸುತ್ತದೆ. ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರಿದ್ದು ಉತ್ತಮವಾಗಿ ಶಾಲೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಮಾತನಾಡಿ, ತಾಲೂಕಿನ ದುಗ್ಗಹಟ್ಟಿ, ವೈ.ಕೆ.ಮೋಳೆ, ಗುಂಬಳ್ಳಿ, ಯರಿಯೂರು, ಯರಗಂಬಳ್ಳಿ, ಹಾಗೂ ಕೆಸ್ತೂರು ಗ್ರಾಮದ ಶಾಲೆಗಳಲ್ಲೂ ಕೂಡ ಈ ಸಾಲಿನಿಂದ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾಧ್ಯಕ್ಷ ಎಂ. ವೀರಭದ್ರಸ್ವಾಮಿ, ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಜಯ, ಪಪಂ ಮಾಜಿ ಸದಸ್ಯ ಮಹೇಶ್, ರೇಚಣ್ಣ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net