ತೆರೆಗೆದಾರರಿಗೆ ಪೌರಾಯುಕ್ತರಿಂದ ಕಿರುಕುಳ

ದೂರು ಪ್ರತಿಗಳು
ದೂರು ಪ್ರತಿಗಳು
Published on

ಪ್ರಮುಖ ಮುಖ್ಯಾಂಶಗಳು

  • ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನಗರಸಭೆ ಸದಸ್ಯೆ ಜಯಮರಿ ದೂರು
ಕೊಳ್ಳೇಗಾಲ: ಆಸ್ತಿ ತೆರಿಗೆದಾರರಿಗೆ ನಿಗದಿತ ಸಮಯಕ್ಕೆ ಇ-ಆಸ್ತಿಗಳನ್ನು ಕೊಡದೆ ತಮ್ಮ ಸ್ವಂತ ಲಾಭಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ರಿಜೆಕ್ಟ್ ಮಾಡಿ ತೆರೆಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆ ಪೌರಾಯುಕ್ತರ ವಿರುದ್ಧ ನಗರಸಭೆ ಸದಸ್ಯೆ ಜಯಮರಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
2026 ರ ಜ.1ರಂದು ನಗರಸಭೆ ಪೌರಾಯುಕ್ತರಾಗಿ ರುದ್ರಮ್ಮ ಶರಣಯ್ಯ ಅಧಿಕಾರ ವಹಿಸಿಕೊಂಡಿದ್ದು, ಆಸ್ತಿ ತೆರಿಗೆದಾರರಿಗೆ ನರಕಸಭೆಯ ಅನುಭವ ತೋರಿಸಿದ್ದಾರೆ. ಡಿಜಿಟಲ್ ಕೀ ಜನರೇಟ್ ಆದ ದಿನದಿಂದ ಇಂದಿನವರೆಗೆ ಸುಮಾರು 300 ರಿಂದ 350 ಇ-ಆಸ್ತಿಯ ಅರ್ಜಿಗಳನ್ನು ಅರ್ಜಿದಾರರಿಗೆ ಯಾವುದೇ ಹಿಂಬರಹ ನೀಡದೆ ಪೌರಾಯುಕ್ತರು ಏಕಾಏಕಿ ರಿಜೆಕ್ಟ್ ಮಾಡಿದ್ದಾರೆ. ತಮ್ಮ ಲಾಗಿನ್‌ನಲ್ಲಿ 3 ತಿಂಗಳಿನಿಂದ ಉಳಿಸಿಕೊಂಡಿರುವ ಇ-ಆಸ್ತಿಗಳ ಅರ್ಜಿಗಳಿಗೆ ಅನುಮೋದನೆ ಕೊಡದೆ ನಿತ್ಯ ಕಚೇರಿಗೆ ಅಲೆದಾಡುವಂತೆ ಮಾಡಿದ್ದಾರೆ.
ಕಂದಾಯ ಶಾಖೆಯಲ್ಲಿನ ಇಬ್ಬರು ಅನುಭವಿ ದ್ವಿತೀಯ ದರ್ಜೆ ನೌಕರರನ್ನು ನಗರಸಭೆಯ ಇತರ ಕಾರ್ಯ ಚಟುವಟಿಕೆಗೆ ನಿಯೋಜನೆಗೊಳಿಸಿ ಡಿ ವೃಂದದ ನೌಕರರನ್ನು ಕಂದಾಯ ಶಾಖೆಯ ವಿಷಯ ನಿರ್ವಾಹಕ ಹಾಗೂ ಕಂಪ್ಯೂಟರ್ ಲಾಗಿನ್‌ನ ಜವಾಬ್ದಾರಿಯೊಂದಿಗೆ ಕರ ವಸೂಲಿಗೆ ನಿಯೋಜನೆ ಮಾಡಿದ್ದಾರೆ.
ಇನ್ನು ಜನವರಿಯಿಂದ ಏಪ್ರಿಲ್‌ವರೆಗೆ ಎರಡೆರಡು ಬಾರಿ ನೌಕರರಿಗೆ ಒಎಂ ಬದಲಾಯಿಸಿದ್ದಾರೆ. ಯಾವ ಆಸ್ತಿ ಮಾಲೀಕ, ದಲ್ಲಾಳಿ ಹಣ ಕೊಡುತ್ತಾರೊ ಅವರ ಇ-ಆಸ್ತಿಯ ಕಡತವನ್ನು ಯಾವುದೇ ಹಿಂಬರಹವಿಲ್ಲದೆ ಅನುಮೋದಿಸಿ ಇ-ಆಸ್ತಿ ಕೊಡುತ್ತಾರೆ. ಈ ಕೆಲಸಕ್ಕೆ ಡೇಟಾ ಎಂಟ್ರಿ ಅಪರೇಟರ್ ಕಿರಣ್ ಎಂಬಾತನಿಂದ ತಮಗೆ ಬೇಕಾದ ಇ-ಆಸ್ತಿಗಳ ಕಡತ (ಅರ್ಜಿಗಳು) ಹಾಗೂ ಲ್ಯಾಪ್‌ಟಾಪ್‌ಗಳನ್ನು ಮನೆಗೆ ತರಿಸಿಕೊಂಡು ಪೌರಾಯುಕ್ತರು ಕೆಲಸ ಮಾಡುತ್ತಿದ್ದು, ಕಿರಣ್ ಮೇಲೂ ಶಿಸ್ತುಕ್ರಮ ಜರುಗಿಸ ಬೇಕಾಗಿದೆ.
ನಗರಸಭೆಯಲ್ಲಿನ ಎಲ್ಲ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಕಚೇರಿ ಮುಂಭಾಗ ಧರಣಿ ನಡೆಸಿದ ಪರಿಣಾಮ ಉಪವಿಭಾಗಾಧಿಕಾರಿ ನಗರಸಭೆಗೆ ದಿಢೀರ್ ಭೇಟಿ ನೀಡಿ ಇ-ಆಸ್ತಿಗಳ ಕಡತಗಳನ್ನು ಪರಿಶೀಲಿಸಲಾಗಿ ಸತ್ಯಾಸತ್ಯತೆ ಮನವರಿಕೆಯಾಗಿ ಇ-ಆಸ್ತಿಯ ಕಡತಗಳನ್ನು ಪೂರ್ಣಗೊಳಿಸಲು ಗಡುವು ನೀಡಿ ಎಸಿ ಆದೇಶಿಸಿದ್ದರು. ಅಂತೆಯೇ ಡಿಸಿ ಸಹ ಪೌರಾಯುಕ್ತರಿಗೆ ತುರ್ತಾಗಿ ಇ-ಆಸ್ತಿಗಳ ಕಡತಗಳ ಕೆಲಸ ಪೂರ್ಣಗೊಳಿಸಲು ಆದೇಶಿಸಿದ್ದರು. ಇವರೊಂದಿಗೆ ಯೋಜನಾ ನಿರ್ದೇಶಕರೂ ತಾಕೀತು ಮಾಡಿದ್ದರೂ ಯಾರ ಮಾತಿಗೂ ಕಿವಿಗೊಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗಾಗಿ ನಗರಸಭೆ ಪೌರಾಯುಕ್ತರ ಕರ್ತವ್ಯದ ಬಗ್ಗೆ ತನಿಖೆ ನಡೆಸಿ ಕಾನೂನು ಶಿಸ್ತುಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net