ಪ್ರತಿಯೊಬ್ಬ ಮಹಿಳೆಗೂ ಸಾವಿತ್ರಿ ಬಾಫುಲೆ ಪ್ರೇರಣೆ

ಚಾಮರಾಜನಗರದ ವರ್ತಕರ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವೆಂಕಟೇಶ್ ಉದ್ಘಾಟಿಸಿದರು. ವಿಜಯ್, ಡಾ.ಶ್ವೇತಾ ಶಶಿಧರ್, ಪರಶುರಾಮ್ ಛಲವಾದಿ, ಶ್ರೀನಿವಾಸ, ಮಲ್ಲೇಶ್, ಸುರೇಖಾ, ರೂಪ, ವೆಂಕಟನಾಯಕ್ ಇನ್ನಿತರರಿದ್ದರು.
ಚಾಮರಾಜನಗರದ ವರ್ತಕರ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವೆಂಕಟೇಶ್ ಉದ್ಘಾಟಿಸಿದರು. ವಿಜಯ್, ಡಾ.ಶ್ವೇತಾ ಶಶಿಧರ್, ಪರಶುರಾಮ್ ಛಲವಾದಿ, ಶ್ರೀನಿವಾಸ, ಮಲ್ಲೇಶ್, ಸುರೇಖಾ, ರೂಪ, ವೆಂಕಟನಾಯಕ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ವೆಂಕಟೇಶ್ ಅಭಿಪ್ರಾಯ
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
  • ನಗರಸಭೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ
ಚಾಮರಾಜನಗರ: ದೇಶದ ಮೊಟ್ಟ ಮೊದಲ ಶಿಕ್ಷಕಿಯಾದ ಸಾವಿತ್ರಿ ಬಾಫುಲೆ ಅವರು ಪ್ರತಿಯೊಬ್ಬ ಮಹಿಳೆಯರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ವೆಂಕಟೇಶ್ ಹೇಳಿದರು.
ನಗರದ ವರ್ತಕರ ಭವನದಲ್ಲಿ ಪ್ರದೇಶ ಮಟ್ಟದ ಒಕ್ಕೂಟಗಳು (ಡೇ-ನಲ್ಮ), ನಗರಸಭೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಮಹಿಳೆಯರಿಂದಲೇ ನಡೆದಿದೆ. ನಮ್ಮ ಮಹಾಕಾವ್ಯಗಳಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನವನ್ನು ನೀಡಲಾಗಿತ್ತು. ಅನೇಕ ಪುರಾಣಗಳು ಹಾಗೂ ಇತಿಹಾಸದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿತ್ರಿ ಬಾುಲೆ ಅವರು ಹಲವಾರು ಕಷ್ಟಗಳ ನಡುವೆ ಶಿಕ್ಷಣ ಪಡೆಯುವ ಮೂಲಕ ದೇಶದ ಪ್ರಥಮ ಶಿಕ್ಷಕಿಯಾದರು. ಅವರ ಸಾಧನೆ ಪ್ರತಿಯೊಬ್ಬ ಮಹಿಳೆಯರಿಗೂ ಆದರ್ಶವಾಗಬೇಕು ಎಂದರು.
ಸ್ವಾತಂತ್ರ್ಯ ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳೆಯರಿಗೆ ಅನೇಕ ಹಕ್ಕು ಅಧಿಕಾರಗಳನ್ನು ದೊರಕಿಸಿಕೊಟ್ಟರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ ಮಹಿಳೆಯರು ಇದನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸ್ಥಾನಗಳನ್ನು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವಿಜಯ್ ಮಾತನಾಡಿ, ಮಹಿಳೆಯರಿಗೆ ವಿವಿಧ ಹಕ್ಕು ಅಧಿಕಾರಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದು ಕೋಡ್ ಬಿಲ್ ಜಾರಿಗೆ ಮುಂದಾಗಿದ್ದರು. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅವರ ಮಹಿಳಾ ಪರವಾದ ನಿಲುವುಗಳು ಜಾರಿಯಾದವು. ಪ್ರಸ್ತುತ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಲಾಗಿದ್ದು, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡುತ್ತಿದ್ದಾರೆ ಎಂದರು.
ನಗರದ ಖಾಸಗಿ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ.ಶ್ವೇತಾ ಶಶಿಧರ್ ಮಾತನಾಡಿ, ಮಹಿಳೆ ಇದ್ದರೇ ಮಾತ್ರ ಎಲ್ಲವೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವರ್ಷವಿಡೀ ಮಹಿಳಾ ದಿನವಾಗಬೇಕು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಜಿಲ್ಲಾ ನರಗಾಭಿವೃದ್ಧಿ ಕೋಶದ ಇಇ ರಾಮಚಂದ್ರ, ಎಇಇ ಶ್ರೀನಿವಾಸ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯ ನಿರ್ದೇಶಕ ಮಲ್ಲೇಶ್, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಸುರೇಖಾ, ನಗರಮಟ್ಟದ ಒಕ್ಕೂಟದ ಅಧ್ಯಕ್ಷೆ ರೂಪ, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ್, ಪರಿಸರ ಅಭಿಯಂತರರಾದ ರೂಪ, ಸಂತೋಷ್ ಹಾಗೂ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net