ಜಿಲ್ಲಾ ಆದಿವಾಸಿ ಹಿತರಕ್ಷಣಾ ಸಮಿತಿಯಿಂದ ಸತ್ಯಾಗ್ರಹ

ಮೆದಗನಾಣೆ ಗಿರಿಜನರ ಹಾಡಿಗೆ ವಿದ್ಯುತ್ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ನಡೆ ಖಂಡಿಸಿ ಗಿರಿಜನರು ಉಪವಾಸ ಸತ್ಯಾಗ್ರಹ ನಡೆಸಿದರು.
ಮೆದಗನಾಣೆ ಗಿರಿಜನರ ಹಾಡಿಗೆ ವಿದ್ಯುತ್ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ನಡೆ ಖಂಡಿಸಿ ಗಿರಿಜನರು ಉಪವಾಸ ಸತ್ಯಾಗ್ರಹ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗಿರಿಜನರ ಹಾಡಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲು ನಿರ್ಲಕ್ಷ್ಯಕ್ಕೆ ಖಂಡನೆ
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಮೆದಗನಾಣೆ ಗಿರಿಜನರ ಹಾಡಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲು ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಶುಕ್ರವಾರ ಗಿರಿಜನರು ಜಿಲ್ಲಾ ಆದಿವಾಸಿ ಹಿತರಕ್ಷಣಾ ಸಮಿತಿ ಜತೆಗೂಡಿ ಉಪವಾಸ ಸತ್ಯಾಗ್ರಹ ನಡೆಸಿದರು.
ಸತ್ಯಾಗ್ರಹ ಸ್ಥಳದಲ್ಲಿ ನೆರೆದಿದ್ದ ಗಿರಿಜನರು ಅಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಆದಿವಾಸಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಶ್ರೀ ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಮೆದಗನಾಣೆ ಗಿರಿಜನರ ಹಾಡಿಯಲ್ಲಿ 4 ತಲೆಮಾರಿನಿಂದ ಜನರು ವಾಸಿಸುತ್ತಿದ್ದಾರೆ. ಇಲ್ಲಿ 45 ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 300ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ವಿದ್ಯುತ್ ಸೌಕರ್ಯ ಇಲ್ಲ. ಇದೀಗ ವಿದ್ಯುತ್ ಸೌಕರ್ಯ ಕಲ್ಪಿಸಲು ಮುಂದಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸಂಪರ್ಕ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳನ್ನು ವಿಚಾರಿಸಿದರೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಎನ್ನುತ್ತಾರೆ. ಇತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಇಲ್ಲಿನ ಜನರು ರಾತ್ರಿ ವೇಳೆ ವಿದ್ಯುತ್ ಸೌಕರ್ಯ ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗಿದೆ. ಈ ವೇಳೆ ಉಪವಾಸ ಸತ್ಯಾಗ್ರಹ ಯಾರಾದರು ಮೃತಪಟ್ಟರೆ ಈ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಹಾಗೂ ಸೆಸ್ಕ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿ ತಿಳಿದು ಸೆಸ್ಕ್ ಎಇಇ ರಂಗಸ್ವಾಮಿ ಅವರು ಸ್ಥಳಕ್ಕಾಗಮಿಸಿ ಜನರಿಂದ ಸಮಸ್ಯೆಯನ್ನು ಆಲಿಸಿ ಮಾತನಾಡಿ, ಗ್ರಾಮಕ್ಕೆ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸಂಪರ್ಕ ನೀಡಲು ಅರಣ್ಯ ಇಲಾಖೆಯಿಂದ ಅನುಮತಿ ಅಗತ್ಯವಿದೆ. ಈ ಸಂಬಂಧ ಫೆ.19 ರಂದು ಕೇಂದ್ರದಿಂದ ಆಗಮಿಸಿದ ತಂಡ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲಾಗಿದೆ. ಆದ್ದರಿಂದ ಸತ್ಯಾಗ್ರಹವನ್ನು ಕೈ ಬಿಡುವಂತೆ ಮನವಿ ಮಾಡಲಾಯಿತು. ಆದರೆ ಇದಕ್ಕೊಪ್ಪದ ಧರಣಿ ನಿರತರು ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಿ ಗ್ರಾಮಕ್ಕೆ ವಿದ್ಯುತ್ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದು, ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net